ಮೈಸೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹದ್ದುಬಸ್ತಿನಲ್ಲಿಡೋಕೆ ತಂತ್ರ ಮಾಡಿದ್ದೇ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಜುಲೈ.19ರಂದು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ನಡೆಯಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂಗೆ ಹ್ಯಾಟ್ಸ್ ಆಫ್. ಎರಡು ಕಾಲು ವರ್ಷದಿಂದ ಏನೇನೂ ಸಾಧನೆ ಮಾಡದೇ ಸಾಧನಾ ಸಮಾವೇಶ ಮಾಡುತ್ತಿರುವ ಇವರ ಭಂಡತನಕ್ಕೆ ಹ್ಯಾಟ್ಸ್ ಆಫ್ ಎಂದು ವ್ಯಂಗ್ಯವಾಡಿದರು.
ಇನ್ನು ಮೈಸೂರಿಗೆ ಸಿಎಂ ಏನು ಕೊಟ್ಟಿದ್ದಾರೆ? ಏನ್ ಸಾಧನೆ ಹೇಳಿ? ಎರಡು ಕಾಲು ವರ್ಷದಲ್ಲಿ ನಿಮ್ಮ ಕೆಲಸ ಏನೂ ಹೇಳಿ ಸಿಎಂ? ಮದುವೆ ಹಾಗೂ ಮುಂಜಿಗೆಂದು ಮೈಸೂರಿಗೆ ಬಂದಿದ್ದೆ ಸಿಎಂ ಸಾಧನೆನಾ? ಏಳು ಕಾಲು ವರ್ಷ ಸಿಎಂ ಆದರು ಮೈಸೂರಿಗೆ ಒಂದು ಸರಿಯಾದ ದಿಕ್ಕು ತೋರಿಸಿಲ್ಲ ನೀವು. ಫಿಲಂ ಸಿಟಿ ಮಾಡಿದ್ರಾ? ಪ್ರವಾಸೋದ್ಯಮ ಸರ್ಕ್ಯೂಟ್ ಆಯ್ತಾ? ಎಲ್ಲದರ ದರ ಜಾಸ್ತಿ ಮಾಡಿದ್ದೆ ನಿಮ್ಮ ಸಾಧನೆ. ಯಾವ ಕೆಲಸವೂ ಮಾಡಿಲ್ಲ. ಬರೀ ಉಡಾಫೆ ಮಾತನಾಡುತ್ತಾ? ಡಿ.ಕೆ.ಶಿವಕುಮಾರ್ ಅವರನ್ನು ಹದ್ದು ಬಸ್ತಿನಲ್ಲಿ ಇಡೋಕೆ ತಂತ್ರ ಮಾಡಿದ್ದೆ ನಿಮ್ಮ ಸಾಧನೆ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ಮಾಡುತ್ತಾ, ರಾಜಣ್ಣ, ಜಾರಕಿಹೊಳಿ, ಶಾಮನೂರು ಅವರನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಎತ್ತಿ ಕಟ್ಟಿದ್ದೆ ಸಿಎಂ ಸಾಧನೆ. ಡಿ.ಕೆ.ಶಿವಕುಮಾರ್‌ಗೆ ನ್ಯಾಯಯುತವಾಗಿ ಸಲ್ಲಬೇಕಾದ ಕುರ್ಚಿ ಬಿಟ್ಟು ಕೊಡದೆ ಇರುವುದೆ ನಿಮ್ಮ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಸಿಲಬಸ್ ಬಿಟ್ಟು ಬರೀ ಔಟ್ ಆಫ್ ಸಿಲಬಸ್ ಮಾತಾಡುತ್ತಾರೆ. ತಮ್ಮ ಖಾತೆ ಬಗ್ಗೆ ಒಂದು ಸುದ್ದಿಗೋಷ್ಠಿ ಮಾಡಿ ಎಂದು ಕೇಳಿದರೆ ಬೇರೆ ಏನೇನೋ ಮಾತಾಡುತ್ತಾರೆ. ಪ್ರಿಯಾಂಕ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಹಾಗೂ ಮೈನಿಂಗ್ ದೊರೆ ಸಂತೋಷ್ ಲಾಡ್‌ಗೆ ಮುಂದಿನ ವಾರ ಬಡ್ಡಿ ಸಮೇತ ಎಲ್ಲವನ್ನೂ ಚುಕ್ತಾ ಮಾಡ್ತಿನಿ. ಪ್ರಿಯಾಂಕಾ ಖರ್ಗೆ ಹಾಗೂ ಸಂತೋಷ ಲಾಡ್‌ನನ್ನು ಮುಂದಿನವಾರ ಎಕ್ಸ್ ಫೋಸ್ ಮಾಡ್ತಿನಿ ಎಂದು ಲೇವಡಿ ಮಾಡಿದರು.





