ಮೈಸೂರು: ರಾಜ್ಯ ರಾಜಕಾರಣದಲ್ಲಿ ಯಾವಾಗ ಬೇಕಾದರೂ ಕ್ರಾಂತಿ ಆಗಬಹುದು ಎಂದು ಶಾಸಕ ತನ್ವೀರ್ ಸೇಠ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸೆಪ್ಟಂಬರ್ ಕ್ರಾಂತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕ್ರಾಂತಿ ಯಾವಾಗ ಬೇಕಾದರೂ ಆಗಬಹುದು. ಸಿಎಂ ಬದಲಾವಣೆ ವೇಳೆ ವಿಚಾರ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಐದು ವರ್ಷ ಸುಭದ್ರ ಸರ್ಕಾರ ಕೊಡಬೇಕಾದದ್ದು ನಮ್ಮ ಜವಾಬ್ದಾರಿ. ಪಕ್ಷದಿಂದ ಸರ್ಕಾರ ಬಂದಿದೆ. ಸರ್ಕಾರದಿಂದ ಪಕ್ಷ ಬಂದಿಲ್ಲ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ನಾನು ನೂರು ವರ್ಷ ಬದುಕಬೇಕು ಅಂದುಕೊಂಡ್ರೂ, ನನ್ನಿಂದ ಸಾಧ್ಯನಾ ಎಂದು ನೋಡಬೇಕು. ಮಾರನೇ ದಿನ ಬೆಳಿಗ್ಗೆ ನನಗೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಇರುತ್ತಾರೊ ಅಲ್ಲಿಯವರೆಗೆ ಅವರೇ ನಮ್ಮ ಮುಖ್ಯಮಂತ್ರಿಗಳು. ಬದಲಾವಣೆ ಇಲ್ಲ ಅಂತ ಎಲ್ಲೂ ಇಲ್ಲ. ಅದು ಐದು ವರ್ಷಗಳ ಕಾಲ ಇರಬಹುದು. ಅಧಿಕಾರ ಬದಲಾವಣೆ ಸೂತ್ರ ನಮಗೆ ಗೊತ್ತಿಲ್ಲ. ವರಿಷ್ಟರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ ಎಂದರು.
ಇನ್ನು ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಶಾಸಕರ ಬೆಂಬಲ ಪಕ್ಷಕ್ಕೆ ಇದೆ. ಯಾರೋ ಮಾತಾಡಿದಕ್ಕೆ ಪ್ರತಿಕ್ರಿಯೆ ಕೊಡುತ್ತಾ ಹೋದರೆ, ಅದಕ್ಕೆ ಕೊನೆ ಇಲ್ಲ. ಯಾರು ಯಾವ ಸನ್ನಿವೇಶದಲ್ಲಿ ಮಾತಾಡಿದ್ದಾರೆ ನನಗೆ ಗೊತ್ತಿಲ್ಲ ಎಂದರು.
ಇನ್ನು ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ. ನಾವು ಬೇರೇ ಇನ್ನೇನು ಹೇಳಲ್ಲ. ಏನು ಬೇಕಾದರೂ ಆಗಬಹುದು. ಸಂಪುಟ ಪುನರ್ ರಚನೆ ಯಾವಾಗ ಬೇಕಾದರೂ ಆಗಬಹುದು. ಆಗೋವರೆಗೂ ಪಕ್ಷದ ಮೇಲೆ ನಂಬಿಕೆ ಇಟ್ಟು ಕಾಯುತ್ತೇನೆ. ನನಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದೇನೆ. ನಾನು ಕೂಡ ಸನ್ಯಾಸಿ ಅಲ್ಲ. ನಿರೀಕ್ಷೆ ಎಲ್ಲರಿಗೂ ಇದೆ. ಅವಕಾಶ ಸಿಕ್ಕಿಲ್ಲ, ಸಿಕ್ಕಾಗ ಕೆಲಸ ಮಾಡುತ್ತೇನೆ. ಆದಾಗ ಆಗುತ್ತದೆ ಎಂದು ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.





