ಮೈಸೂರು: ರಾಜ್ಯ ರಾಜಕೀಯದಲ್ಲಿ ಬದಲಾವಣೆ ಖಚಿತ. ಆದ್ದರಿಂದ ನವೆಂಬರ್‌ನಲ್ಲಿ ರಾಜಕೀಯ ಬದಲಾವಣೆ ಆಗೋದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ. ಬಿಜೆಪಿ ವಿಪಕ್ಷವಾಗಿ ತನ್ನ ಕೆಲಸ ಮಾಡುತ್ತದೆ ಎಂದು ಭವಿಷ್ಯ ನುಡಿದರು.
ಇನ್ನು ನಾಳೆ ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಸಾಧನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸ್ಥಾನ ಅಲ್ಲಾಡುವ ವೇಳೆ ಈ ರೀತಿ ಸಮಾವೇಶ ಮಾಡಲಾಗುತ್ತದೆ. ಸಮಾವೇಶದ ಮೂಲಕ ಕಾಂಗ್ರೆಸ್ ಹೈಕಮಾಂಡ್ ಬೆದರಿಸುವ ತಂತ್ರ ಇದಾಗಿದೆ. ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಭೇಟಿಯಾಗಲು ಸಮಯವೇ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಲು ರಾಹುಲ್ ಗಾಂಧಿ ಸಮಯ ಕೊಟ್ಟಿಲ್ಲ. ಹೀಗಾಗಿ ಸವಾಲು ಹಾಕಲು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಇದು ಸಾಧನಾ ಸಮಾವೇಶ ಅಲ್ಲ., ಬ್ಲ್ಯಾಕ್‌ಮೇಲ್ ಸಮಾವೇಶ. ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್ ಮಾಡಲು ಮಾಡುತ್ತಿರುವ ಸಮಾವೇಶ ಎಂದು ಲೇವಡಿ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಏನು ಸಾಧನೆ ಮಾಡಿದ್ದಾರೆ ಎಂದು ಸಮಾವೇಶ ಮಾಡುತ್ತಿದ್ದಾರೆ. ಯಾವ ಸಮಾವೇಶಗಳೂ ಈ ಬಾರಿ ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ ರಾಜಕೀಯವಾಗಿ ಬೆಳವಣಿಗೆಗಳು ಆಗುವುದು ಸತ್ಯ. ನವೆಂಬರ್‌ನಲ್ಲಿ ಸಿಎಂ ಬದಲಾವಣೆ ನಿಶ್ಚಿತ ಎಂದು ಭವಿಷ್ಯ ಹೇಳಿದರು.





