ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಗೆ ಅನಾಮಿಕರು ಒಂದಲ್ಲಾ ಒಂದು ರೀತಿ ಹಿಂಸೆ ಕೊಡುತ್ತಿದ್ದಾರೆ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಅರಮನೆ ಆವರಣಕ್ಕೆ ಪ್ರತಿ ದಿನವೂ ಹಲವು ಅನಾಮಿಕರು ಬಂದು ಆನೆ ಸೊಂಡಿಲು ಹಾಗೂ ದಂತಗಳನ್ನು ಹಿಡಿದು ರೀಲ್ಸ್ ಮಾಡುತ್ತಿದ್ದಾರೆ.
ಆನೆಗಳ ಮುಂದೆ ಫೋಟೋಶೂಟ್ ಮಾಡಿಸಲು ಅರಣ್ಯ ಅಧಿಕಾರಿಗಳು ಅನುಮತಿ ಕೊಡುತ್ತಿದ್ದಾರೆ ಎಂದು ಪ್ರಾಣಿಪ್ರಿಯರು ಗಂಭೀರ ಆರೋಪ ಮಾಡಿದ್ದಾರೆ.
ಮೊನ್ನೆ ತಾನೇ ಕಂಜನ್ ಹಾಗೂ ಧನಂಜಯ ಆನೆಗಳ ನಡುವೆ ಕಾಳಗ ನಡೆದು ಭಾರೀ ಆತಂಕ ಸೃಷ್ಟಿಯಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅರಮನೆ ಆವರಣಕ್ಕೆ ಬರುವ ಅನಾಮಿಕ ವ್ಯಕ್ತಿಗಳ ರೀಲ್ಸ್ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೀಲ್ಸ್ ಹೆಸರಿನಲ್ಲಿ ಏನೂ ಅರಿಯದ ಮೂಕ ಪ್ರಾಣಿಗಳಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದು, ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.