ಮೈಸೂರು: ಪ್ರತಿಯೊಬ್ಬರು ದೈನಂದಿನ ಚಟುವಟಿಕೆಗಳಲ್ಲಿ ಸೂಕ್ಷ್ಮತೆಗೆ ಹೆಚ್ಚು ಗಮನವನ್ನು ನೀಡಬೇಕು. ಯಾವುದೇ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಲ್ಲಿ ನಮ್ಮ ಕಾರ್ಯ ಹಾಗೂ ಚಟುವಟಿಕೆಗಳೊಂದಿಗೆ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಉಷಾ ರಾಣಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೈಸೂರು ಇವರ ಸಹಯೋಗದಲ್ಲಿ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದರು.
ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ ದಡಿ PCPNDT ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ, ಮಾನವ ಕಳ್ಳ ಸಾಗಣಿಕೆ, ಇವುಗಳನ್ನು ನೋಡಿದಾಗ ಮಹಿಳೆಯರೆ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯವು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯವನ್ನು ತಡೆಗಟ್ಟಲು Society for Enlightenment and Vs union of India ಎಂಬ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ, ರಾಜ್ಯ ಸರ್ಕಾರಗಳಲ್ಲಿ ಜಿಲ್ಲಾ ವಿವಾಹ ರಕ್ಷಣಾಧಿಕಾರಿಗಳನ್ನು ನೇಮಿಸುವಂತಹ ಜವಾಬ್ದಾರಿಯನ್ನು ನೀಡುವುದರ ಜೊತೆ ಬಾಲ್ಯ ವಿವಾಹವನ್ನು ತಡೆಗಟ್ಟುವಂತಹ ಕೆಲಸವನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದೆ ಎಂದು ತಿಳಿಸಿದರು.
ಈ ಕಾರ್ಯಗಾರದ ಉದ್ದೇಶ ನಮ್ಮೆಲ್ಲರ ಮೇಲಿರುವಂತಹ ಜವಾಬ್ದಾರಿಯನ್ನು ಹೆಚ್ಚು ಮಾಡುವುದಲ್ಲದೆ ಎಲ್ಲಾ ಜನತೆಗೆ ಇದರ ಉದ್ದೇಶ ಮತ್ತು ಸಂದೇಶವನ್ನು ಕೊಡುತ್ತದೆ. ದೇಶದ ಸಂಪತ್ತಾದ ಮಕ್ಕಳ ಹಕ್ಕುಗಳಿಗೆ ಆಪತ್ತು ಬಾರದಂತೆ ನೋಡಿಕೊಳ್ಳಲು ಕರ್ತವ್ಯವನ್ನು ನಿರ್ಭಿತಿಯಿಂದ ನಿಷ್ಪಕ್ಷಪಾತವಾಗಿ ಸರಾಗವಾಗಿ ನೆರವೇರಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಕೆ. ಎಂ ಅವರು ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಶೋಷಣೆ ಹಲವು ಕಡೆ ಕಡಿಮೆಯಾಗುತ್ತಿವೆ ಇನ್ನು ಕೆಲವು ಕಡೆ ಜಾಸ್ತಿ ಆಗುತ್ತಿವೆ. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಕಾರ್ಯಗಾರ ಏರ್ಪಡಿಸಲಾಗಿದ್ದು, ಇಂತಹ ಕಾರ್ಯಕ್ರಮ ಮಾಡುತ್ತಿರುವ ಉದ್ದೇಶ ಯಾವ ವಿಚಾರಗಳು ಹೆಚ್ಚು ಹೆಚ್ಚು ಚರ್ಚೆಗೆ ಬರುತ್ತವೆ ಆಗ ಮಾತ್ರ ಹೊಸ ವಿಚಾರಗಳು ಹೊಸ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತವೆ ಇದರ ಜೊತೆಗೆ ಇಂತಹ ಚರ್ಚೆಗಳ ಮೂಲಕ ಇಲಾಖೆಗಳಲ್ಲಿ ಸಹ ಹೊಂದಾಣಿಕೆ ಎಂಬುದು ಸೃಷ್ಟಿಯಾಗುತ್ತದೆ ಎಂದರು.
ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಎಂಬುವುದರ ಬಗ್ಗೆ ತಿಳಿಸಿಕೊಡಬೇಕು. ಜೊತೆಗೆ ಅವರಿಗೆ ಅರಿವು ಮೂಡಿಸಬೇಕು. ಮಕ್ಕಳಿಗೆ ತಿಳುವಳಿಕೆ ಮೂಡಿಸುವುದರ ಜೊತೆ ಸ್ವಯಂ ಶಕ್ತಿ ತುಂಬಬೇಕು ಇದರಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತಹ ಸ್ವಯಂ ಶಕ್ತಿಯು ಸಹ ಮಕ್ಕಳಲ್ಲಿ ಹೆಚ್ಚಾಗುತ್ತದೆ ಇದರಿಂದ ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯದಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಚಿಕ್ಕ ಹಂತಗಳಲ್ಲಿಯೇ ನಾವು ಹೇಗೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೇವೆ ಅಲ್ಲಿಂದ ಪ್ರಕರಣಗಳು ಸಹ ಕಡಿಮೆ ಆಗುತ್ತ ಹೋಗುತ್ತವೆ. ಆದರಿಂದ ಇಂತಹ ರೀತಿಯ ಕೆಲಸಗಳನ್ನು ಚಿಕ್ಕ ಹಂತಗಳಲ್ಲಿಯೇ ನಿರ್ವಹಿಸಬೇಕು. ಜೊತೆಗೆ ಮಕ್ಕಳು ಹಾಗೂ ಮಹಿಳೆಯರನ್ನು ಸಬಲೀಕರಣ ಮಾಡುವುದರಿಂದ ಅವರಿಗೆ ಆತ್ಮ ಧೈರ್ಯ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳಲ್ಲಿ ಓದಬೇಕು ಎಂಬ ಆಸೆ ತುಂಬಬೇಕು. ಶಿಕ್ಷಣ ಪಡೆಯುವಂತೆ ಅವರನ್ನು ಪ್ರೇರೇಪಿಸಬೇಕು ಶಿಕ್ಷಣ ನೀಡುವುದರಿಂದಲೂ ಸಹ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಇಬ್ಬರಿಗೂ ಸಹ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ಹೇಗೆ ಗೌರವ ಕೊಡಬೇಕು ಎಂಬುದುರ ಬಗ್ಗೆ ಸಹ ತಿಳಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ ಇದರಿಂದ ಅನೇಕ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿ. ಜಿ ಅವರು ಮಾತನಾಡಿ ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಪ್ರತಿಯೊಂದು ಶಾಲೆಗಳಲ್ಲಿ ಕೌನ್ಸಿಲ್ ಗಳು ಇರಬೇಕು. ಇಲ್ಲದಿದ್ದರೆ ಶಿಕ್ಷಕರಿಗೆ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ನೀಡಬೇಕು ಇದರಿಂದ ಶಿಕ್ಷಕರು ಮಕ್ಕಳಿಗೆ ಜಾಗೃತಿಯನ್ನು ಮೂಡಿಸುತ್ತಾರೆ ಎಂದರು.
ಪ್ರತಿಯೊಬ್ಬ ಹೆಣ್ಣು ಮಕ್ಕಳು ತಮಗೆ ಇರುವಂತ ಕಾಯ್ದೆಗಳ ಬಗ್ಗೆ ತಿಳಿದುಕೊಂಡು ಅದರ ಉಪಯೋಗ ಪಡೆದುಕೊಂಡು ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಿ. ಪ್ರತಿಯೊಂದು ಕೆಲಸವನ್ನು ಪ್ರತಿಯೊಂದು ಇಲಾಖೆಯು ನಿರ್ವಹಿಸಬೇಕು. ಬೇರೆ ಇಲಾಖೆಗಳ ಮೇಲೆ ನೆಪ ಹೇಳದೆ ಎಲ್ಲಾ ಇಲಾಖೆಗಳು ಸಹ ಕೈ ಜೋಡಿಸುವುದರಿಂದ ನಾವು ಮಾಡುವಂತಹ ಕೆಲಸಗಳಲ್ಲಿ ಯಶಸ್ಸು ಕಾಣಬಹುದು ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾಗೇಶ್ ಅವರು ಮತನಾಡಿ, ವಿದ್ಯವಂತರಾಗಿರುವವರೆ ಹೆಚ್ಚು ಮೋಸಹೋಗುತ್ತಾ ಇರುವುದರಿಂದ ಈ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ ಇದರ ಬಗ್ಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಗಮನ ಕೊಡಬೇಕು, ಸಹಾಯಕ್ಕಾಗಿ ಪೊಲೀಸ್ ಅಧಿಕಾರಿಗಳು ಯಾವಾಗಲೂ ಸಹ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು.
ಉಪ ಪೊಲೀಸ್ ಆಯುಕ್ತರಾದ ಮುತ್ತುರಾಜ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮಕ್ಕಳನ್ನು ಯಾವ ರೀತಿಯಲ್ಲಿ ಮುಟ್ಟುತ್ತಾ ಇದ್ದಾರೆ ಎಂಬ ಅರಿವು ಸಹ ಅವರಲ್ಲಿ ಇರುವುದಿಲ್ಲ ಆದ್ದರಿಂದ ಪೋಷಕರು ಮಕ್ಕಳಿಗೆ ಇಂತಹ ವಿಚಾರಗಳಲ್ಲಿ ತಿಳುವಳಿಕೆ ನೀಡಬೇಕು ಅವರಿಗೆ ಮನೆಗಳಲ್ಲಿಯೇ ಇಂತಹ ವಿಚಾರಗಳ ಬಗ್ಗೆ ತಿಳಿಸಬೇಕು. ಇದರಲ್ಲಿ ಯಾವುದೇ ತರಹದ ನಾಚಿಕೆ ಎಂಬ ವಿಷಯ ಬರುವುದಿಲ್ಲ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಪೋಷಕರು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಸಿ.ಪಿ.ಒ ಪ್ರಭು ಸ್ವಾಮಿ, ಉಪಕಾರ್ಯದರ್ಶಿ ಸವಿತಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಬಸವರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಪ್ಯಾನಲ್ ವಕೀಲರಾದ ಎನ್. ಸುಂದರ್ ರಾಜ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಎನ್. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಡಿ. ಜೆ. ಮಮತ ಅವರು ಉಪಸ್ಥಿತರಿದ್ದರು.