ಮೈಸೂರು: ವೈದ್ಯ ವೃತ್ತಿ ಮಾಡುವವರಿಗೆ ತಾಳ್ಮೆ, ಸಂಯಮ, ಏಕಾಗ್ರತೆ ಮುಖ್ಯ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಗಾನ ವೈದ್ಯ ಲೋಕ ಸಂಸ್ಥೆ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಎಂದೂ ಮರೆಯದ ಹಾಡು -೧೨’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೃತ್ತಿಯ ನಡುವೆಯೂ ಸಾಹಿತ್ಯ ಮತ್ತು ಸಂಗೀತ ಮನೋಲ್ಲಾಸದ ಜೊತೆಗೆ ಸಂಸ್ಕಾರವನ್ನು ನೀಡುತ್ತದೆ. ಮೈಸೂರಿನ ಗಾನ ವೈದ್ಯಲೋಕ ತಂಡದ ಗಾಯಕರು ವೈದ್ಯರ ದಿನಾಚರಣೆ ಅಂಗವಾಗಿ ಡಾ.ಬಿ.ಸಿ. ರಾಯ್ ನೆನಪಿನಲ್ಲಿ ಸಂಗೀತ ಸಂಜೆ ಆಯೋಜನೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯು ಜುಲೈ ೧ ರಂದೇ ನಡೆಯುತ್ತಾ ಬಂದಿರುವುದು ಅರ್ಥಪೂರ್ಣವಾಗಿದೆ. ವೈದ್ಯಕೀಯ ಕ್ಷೇತ್ರ ಮತ್ತು ಪತ್ರಿಕೋದ್ಯಮ ಸಮಯದ ಅರಿವಿಲ್ಲದೆ ಕಾರ್ಯನಿರ್ವಹಿಸಬೇಕಾದ ವೃತ್ತಿಗಳಾಗಿವೆ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸಮಾಜದ ಬಗ್ಗೆ ಕಾಳಜಿ ಮತ್ತು ಕಳಕಳಿಯಿಂದ ಕಾರ್ಯ ನಿರ್ವಹಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾನ ವೈದ್ಯಲೋಕ ಸಂಸ್ಥೆಯ ಗೌರವಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿದರು. ಗಾನ ವೈದ್ಯಲೋಕ ಸಂಸ್ಥೆಯ ಅಧ್ಯಕ್ಷ ಡಾ.ಟಿ. ರವಿಕುಮಾರ್, ಡಾ. ಪೂರ್ಣಿಮಾ, ಡಾ. ಸುರೇಂದ್ರನ್, ಡಾ. ಶ್ಯಾಮ್ ಪ್ರಸಾದ್, ಡಾ. ಶಿವಕುಮಾರ್, ಲತಾ ಮನೋಹರ್ ಸಿ.ಎಸ್. ವಾಣಿ, ಡಾ. ಚಿನ್ನ ನಾಗಪ್ಪ , ಡಾ.ಮನು , ಡಾ.ಎಲ್. ಸುಮಾ, ಉಪನ್ಯಾಸಕ ಎಡೆಯೂರು ಸಮೀಉಲ್ಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.





