ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’ ಏರ್ಪಡಿಸಲಾಗಿದೆ. ಅದರ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.
ಎರಡನೇ ದಿನದ ಸಂಗೀತ ಸಂಜೆಯಲ್ಲಿ ಸಂಜೆ 5 ರಿಂದ 5;30 ಭಾರತೀಯ ವಿದ್ಯಾಭವನದ ಮೈಸೂರು ಕಲಾ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ನಾಟಕ ಪ್ರದರ್ಶಿಸಲಾಯಿತು. ನೃತ್ಯ ನಾಟಕಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸಂಜೆ 5.45 ರಿಂದ 6.30ರವರೆಗೆ ಋತ್ವಿಕ್ ಸಿ.ರಾಜ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಜಾನಪದ ಗೀತೆ, ಭಕ್ತಿಗೀತೆ, ಜನಪ್ರಿಯ ಚಲನಚಿತ್ರಗೀತೆಗಳ ಗಾಯನದಿಂದ ನೆರೆದಿದ್ದವರನ್ನು ಸಂಗೀತ ಕಾರ್ಯಕ್ರಮ ತಲೆದೂಗುವಂತೆ ಮಾಡಿತು.
ಸಂಜೆ 6.45 ರಿಂದ 8 ಗಂಟೆವರೆಗೆ ಮನೋ ಮ್ಯೂಸಿಕ್ ಲೈನ್ಸ್ ಮತ್ತು ತಂಡದಿಂದ ಕವಿ, ಕಾವ್ಯ, ಸಂಗೀತ ಸಂಗಮ ಪ್ರಸ್ತುತಿಪಡಿಸಿದರು. ಭಾವಗೀತೆಗಳು, ಸುಮಧುರ ಗೀತೆಗಳ ಗಾಯನ ಕೇಳುಗರನ್ನು ಇಂಪಾಗಿಸಿತು. ರಾತ್ರಿ 8.15 ರಿಂದ 9.30 ರವರೆಗೆ ಎಚ್.ಎಲ್.ಶಿವಶಂಕರ್ ಸ್ವಾಮಿ ಮತ್ತು ತಂಡದವರಿಂದ ರಾಗ ರಿದಂ ಫ್ಯೂಷನ್‌ನ ಸಂಗೀತಕ್ಕೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.





