ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟಕ್ಕೆ 60ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜನೆ ಮಾಡಲಾಗಿದ್ದು, ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆಷಾಡ ಶುಕ್ರವಾರದ ಪ್ರಯುಕ್ತ ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರ ಹರಿದು ಬರಲಿದ್ದು, ಅಲ್ಲಿ ತೆರಳುವ ಎಲ್ಲಾ ಭಕ್ತರಿಗೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ನಗರ ಸಾರಿಗೆಯಿಂದ ಸುಮಾರು 60ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜನೆ ಮಾಡಲಾಗಿದ್ದು, ಸುಮಾರು 100ರಷ್ಟು ಕೆಎಸ್ಆರ್‌ಟಿಸಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸಾಮಾನ್ಯ, 300 ರೂ ಟಿಕೆಟ್ ಮತ್ತು 2000 ರೂ ವಿಶೇಷ ದರ್ಶನದ ಟಿಕೆಟ್ ಎಂದು ಭಕ್ತರಿಗೆ ಮೂರು ವಿಭಾಗ ಮಾಡಿ ವ್ಯವಸ್ಥೆ ಮಾಡಲಾಗಿದೆ. ನಗರದ ಲಲಿತಮಹಲ್ ಎಲಿಪ್ಯಾಡ್ ಬಳಿಯಿರುವ ಮೈದಾನದಲ್ಲಿ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. 2000ರೂ ಟಿಕೆಟ್ ಪಡೆದ ಭಕ್ತರನ್ನು ಕರೆದೊಯ್ಯಲು ಮಲ್ಟಿಪಲ್ ಆಕ್ಸಲ್ ಹವಾನಿಯಂತ್ರಿತ ಎಂಟು ಹೈಟೆಕ್ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಅದರ ಜೊತೆಗೆ ಸುಮಾರು 50ಕ್ಕೂ ಹೆಚ್ಚು ಸಾಮಾನ್ಯ ಬಸ್‌ಗಳು ಸಂಚರಿಸಲಿವೆ. ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ನಿರ್ವಾಹಕರನ್ನೇ ಗುರುತಿಸಿ ನಿಯೋಜನೆ ಮಾಡಲಾಗಿದೆ. ಶಕ್ತಿ ಯೋಜನೆ ಅನ್ವಯವಾಗುವಂತೆ ಎಲ್ಲಾ ಮಹಿಳೆಯರಿಗೆ ಉಚಿತವಿರುತ್ತದೆ. ಆದರೆ ಆಷಾಡ ಶುಕ್ರವಾರ ಮಾತ್ರ ಪುರುಷ ಪ್ರಯಾಣಿಕರಿಗೆ ಉಚಿತ ಪ್ರಯಾಣ ಇರಲಿದ್ದು, ಉಳಿದ ದಿನ ಟಿಕೆಟ್ ಪಡೆದು ಹೋಗಬೇಕಾಗಿದೆ ಎಂದು ಮಾಹಿತಿ ನೀಡಿದರು.





