ಮೈಸೂರು: ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಈ ಕುರಿತು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿಗಳು ಫೇಲ್ಯೂರ್ ಆಗಿವೆ. ಯಾವ ಕಡೆಯಿಂದ ತೆರಿಗೆ ಸಂಗ್ರಹ ಆಗುತ್ತಿದೆ, ಆ ಹಣವನ್ನು ಏನು ಮಾಡುತ್ತಿದ್ದೀರಿ ಎಂಬುದೇ ಗೊತ್ತಾಗುತ್ತಿಲ್ಲ. ಕೇಂದ್ರ ಸರ್ಕಾರ ಕೊಡುವ ಅನುದಾನದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಪರಸ್ಪರ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು, ಯಾರು ಸಿಎಂ ಆಗಬೇಕೆಂದು ಮೇಲಾಟ ನಡೆಯುತ್ತಿದೆ. ಸಿಎಂ ಬದಲಾವಣೆ ವಿಚಾರ ಅವರ ಪಕ್ಷದ ಆಂತರಿಕ ವಿಚಾರ. 135 ಶಾಸಕರನ್ನು ಕರ್ನಾಟಕ ರಾಜ್ಯದ ಜನರ ನಂಬಿ ಗೆಲ್ಲಿಸಿದ್ದಾರೆ. ಅವರಿಗೆ ನ್ಯಾಯ ಕೊಡಿಸಿ ಎಂದು ಸಲಹೆ ನೀಡಿದರು.
ಇನ್ನು ದಲಿತರೊಬ್ಬರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಎಂಬ ಸಿಎಂ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ವಿಚಾರವನ್ನು ಡೈವರ್ಟ್ ಮಾಡಲು ಏನೇನೋ ಮಾತನಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಅನೇಕರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.





