ಮೈಸೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು. ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು(ನ.23) ಉಪಚುನಾವಣೆ ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರಾಜಿತವಾಗಿದ್ದಾರೆ. ಪ್ರತಿಬಾರಿಯೂ ಆಡಳಿತ ಪಕ್ಷವೇ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ನಾನು ಹೋದವನಲ್ಲ. ನನ್ನ ಮಗ ಹರೀಶ್ ಗೌಡ , ಈ ಭಾಗದ ಶಾಸಕರು ಹಾಗೂ ಕಾರ್ಯಕರ್ತರೆಲ್ಲರೂ ಹೋಗಿದ್ದರು. ಅವರೆಲ್ಲರೂ ನಿಖಿಲ್ ಗೆಲ್ಲುತ್ತಾರೆ ಎಂದೇ ಹೇಳಿದ್ದರು. ಆದರೆ ಮೂರನೇ ಬಾರಿಗೆ ಸೋತಿದ್ದಾರೆ, ಏನೂ ಮಾಡಲು ಆಗುವುದಿಲ್ಲ. ನಿಖಿಲ್ ಅವರು ಧೈರ್ಯದಿಂದ ಈ ಚುನಾವಣೆಯ ಸೋಲನ್ನು ಎದುರಿಸಿ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಬೇಕು. ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಸೋಲು-ಗೆಲುವು ಯಾವುತ್ತು ಕೂಡ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ.