ಮೈಸೂರು: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ ಜೊತೆಗೆ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ಏರ್ಪಡಿಸಿದ್ದ ಪತ್ರಿಕಾ ವಿತರಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೊಳಚೆ ಪ್ರದೇಶಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನುಮೂಳೆ ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲ ಆಗಿ ಕೆಲಸ ಮಾಡುತ್ತಾರೆ. ಪತ್ರಿಕೆಯ ಚಂದಾ ಹಣ ಸಂಗ್ರಹಿಸುವ ಜೊತೆಗೆ ಸಣ್ಣ ಜಾಹಿರಾತುದಾರರನ್ನೂ ಸಂಸ್ಥೆಯ ಜೊತೆ ಬೆಸೆಯುತ್ತಾರೆ ಎಂದರು.
ಸುದ್ದಿಗಳು, ಪತ್ರಿಕೆಗಳು ಹಳತಾಗುವ ಮೊದಲು, ಓದುಗರ ಕೈಗೆ ಕಾಫಿ ಲೋಟ ಬರುವ ಮೊದಲು ಪತ್ರಿಕಾ ವಿತರಕರು ಓದುಗರ ಮನೆ ಬಾಗಿಲಿಗೆ ತಲುಪುತ್ತಾರೆ. ಇದಕ್ಕಾಗಿ ಕೋಳಿ ಕೂಗುವ ಮೊದಲೇ ಮನೆಯಿಂದ ಎದ್ದು ಹೊರಡುತ್ತಾರೆ. ನಾವು ಪತ್ರಕರ್ತರು ಬೆಚ್ಚಗೆ ಮಲಗಿರುವಾಗ ಮಳೆ, ಚಳಿ ಮತ್ತು ಪ್ರತೀಕೂಲ ವಾತಾವರಣ ಲೆಕ್ಕಿಸದೆ ಸೈಕಲ್ ತುಳಿಯಬೇಕಿದೆ ಎಂದರು.
ಒಬ್ಬ ಪತ್ರಿಕಾ ವಿತರಕನಿಗೆ ತಿಂಗಳಿಗೆ ಸಿಗುವುದು ಕೆಲವೇ ಸಾವಿರ ರೂಪಾಯಿ ಇರಬಹುದು. ಆದರೆ, ಸಾವಿರಾರು ಪತ್ರಿಕಾ ವಿತರಕರು ಸಂಗ್ರಹಿಸುವ ಚಂದಾ ಹಣ ಮತ್ತು ಸಣ್ಣ ಪ್ರಮಾಣದ ಜಾಹಿರಾತು ಹಣ ಎಲ್ಲಾ ಒಟ್ಟು ಲೆಕ್ಕ ಹಾಕಿದರೆ ಹತ್ತಾರು ಕೋಟಿ ಆಗುತ್ತದೆ. ಹೀಗಾಗಿ ಪತ್ರಿಕೋದ್ಯಮದ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಸಮುದಾಯವಾಗಿದೆ ಎನ್ನುವುದನ್ನು ನಾವು ಮರೆಯಬಾರದು ಎಂದರು.
ಸುತ್ತೂರು ಶ್ರೀ ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ KUWJ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪತ್ರಿಕಾ ವಿತರಕರ ಮಹಾ ಸಂಘದ ಅಧ್ಯಕ್ಷರಾದ ಶಂಬುಲಿಂಗ ಅವರು ಸೇರಿ ಹಲವು ಮಹನೀಯರು ಉಪಸ್ಥಿತರಿದ್ದರು.





