ಮೈಸೂರು: ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂತಹ ಅಧಿಕಾರಿಗಳನ್ನು ನಮ್ಮ ಸರ್ಕಾರ ಸಹಿಸಲ್ಲ. ಜಿಲ್ಲಾ ಮಂತ್ರಿಗಳೂ ಈ ವಿಚಾರದಲ್ಲಿ ಮುಲಾಜು ತೋರಿಸದೆ ಕ್ರಮಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಇಂದು ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಸೂರು ಸಾಂಸ್ಕೃತಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪ್ರತಿ ವರ್ಷ ದಸರಾ ಮಹೋತ್ಸವವನ್ನು ಸರ್ಕಾರ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಕಳೆದ ವರ್ಷ ಭೀಕರ ಬರಗಾಲ ಇತ್ತು. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಹೀಗಾಗಿ ಬರಗಾಲ ಇಲ್ಲದಿರುವುದರಿಂದ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ದಸರಾ ಆಚರಿಸುವ ಜೊತೆಗೆ ವೈಭವ ಮತ್ತು ಸಂಭ್ರಮಕ್ಕೆ ಕೊರತೆ ಆಗಬಾರದು. ನಮ್ಮ ಪರಂಪರೆ, ಚರಿತ್ರೆ, ಇತಿಹಾಸದ ವೈಭವ ಮಹೋತ್ಸವದಲ್ಲಿ ಮತ್ತು ಮಹೋತ್ಸವದ ಪರಿಣಾಮದಲ್ಲಿ ಜನರಿಗೆ ಕಾಣಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷ ಬರಗಾಲ ಇದ್ದಾಗಲೂ ತೊಂದರೆ ಆಗದಷ್ಟು ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ಇದಕ್ಕಾಗಿ ಇಂಧನ ಇಲಾಖೆಗೆ ಅಭಿನಂದನೆ ಎಂದ ಸಿಎಂ ಸುಮಾರು ಇಪ್ಪತ್ತು ಸಾವಿರ ಕೋಟಿ ಸರ್ಕಾರದ ಮೇಲೆ ಹೊರೆ ಆದರೂ ಏಳನೇ ವೇತನ ಆಯೋಗ ಜಾರಿ ಮಾಡಿ ನಿಮ್ಮ (ಅಧಿಕಾರಿಗಳ-ಸಿಬ್ಬಂದಿಯ) ವೇತನ ಹೆಚ್ಚಿಸಿದ್ದೇವೆ. ಗ್ಯಾರಂಟಿಗಳಿಗೆ ಹಣ ಕೊಟ್ಟೂ ಕೂಡ ನಿಮ್ಮ ಕೆಲಸಕ್ಕೆ ತಕ್ಕಂತೆ ಸಂಬಳ ಕೊಡಬೇಕು ಎನ್ನುವ ಉದ್ದೇಶದಿಂದ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಿಸಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ಜಾತಿ ಸೋಂಕು ಇರಬಾರದು
ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಜಾತಿ ಸೋಂಕು ಇರಬಾರದು. ಸಂವಿಧಾನ ಮತ್ತು ಜಾತ್ಯತೀತವಾಗಿ ಸರ್ಕಾರದ ಕಾರ್ಯಕ್ರಮಗಳನ್ನು, ಜನರ ಸೇವೆಯನ್ನು ಮಾಡಬೇಕು ಎಂದರು.
ನಾವೆಲ್ಲಾ ಗ್ರಾಮೀಣ ಬದುಕಿನಿಂದಲೇ ಬಂದವರು. ನಮ್ಮ ಗ್ರಾಮೀಣ ಬದುಕು, ಗ್ರಾಮೀಣ ಸಮಾಜವನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವುದು ನನ್ನ ಗುರಿ. ನನ್ನ ಗುರಿಗೆ ತಕ್ಕಂತೆ ನೀವುಗಳೂ ಕೈ ಜೋಡಿಸಿ ಕೆಲಸ ಮಾಡಬೇಕು. ಏಕೆಂದರೆ ಶೇ90 ರಷ್ಟು ಅಧಿಕಾರಿ ಮತ್ತು ಸಿಬ್ಬಂದಿ ಕೂಡ ಗ್ರಾಮೀಣ ಭಾಗದಿಂದ ಬಂದವರು ಎಂದು ನೆನಪಿಸಿದರು.
ಅಧಿಕಾರಿಗಳಿಗೆ ಸಾಮಾಜಿಕ ಪ್ರಜ್ಞೆ ಹೇಗಿರಬೇಕು ಎನ್ನುವುದನ್ನು ನೆನಪಿಸಲು ಮುಖ್ಯಮಂತ್ರಿಗಳು ಡಾ.ಅಂಬೇಡ್ಕರ್ ಅವರ ಮಾತುಗಳನ್ನು, ಸಂವಿಧಾನ ಜಾರಿ ಸಭೆಯಲ್ಲಿ ಅವರು ಮಾಡಿದ ಭಾಷಣದ ಸಾಲುಗಳನ್ನು ವಿವರಿಸಿದರು.





