ಮೈಸೂರು: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂತಸ ವ್ಯಕ್ತಪಡಿಸಿದ್ದು, ಇದು ಅತ್ಯದ್ಭುತವಾದ ಫಲಿತಾಂಶ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ, ಮೈತ್ರಿಕೂಟಕ್ಕೆ ಸಿಕ್ಕ ಉತ್ತಮ ಫಲಿತಾಂಶ ಇದು. ಬಿಹಾರದ ಸಮಸ್ತ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ ಎಂದು ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇನ್ನು ಕಾಂಗ್ರೆಸ್ ನಾಯಕರಿಂದ ವೋಟ್ ಚೋರಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ನಿರೂಪಣೆಗೆ ಬೆಲೆ ಇಲ್ಲ. ಸಾಕ್ಷಿ ಇದ್ರೆ ಎಲೆಕ್ಷನ್ ಕಮಿಷನ್ ಗೆ ಹೋಗಿ ಕೊಡಿ ಎಂದು ಹೇಳಿದ್ದೀವಿ. ಇವತ್ತಿನವರೆಗೂ ಕೂಡ ಅವರು ಕೊಟ್ಟಿಲ್ಲ. ವೋಟ್ ಚೋರಿಯನ್ನು ಚುನಾವಣೆ ತಂತ್ರವಾಗಿ ಬಳಕೆ ಮಾಡ್ತಿದ್ದಾರೆ ಅಷ್ಟೇ. ಜನರ ದಿಕ್ಕು ತಪ್ಪಿಸೋದು, ಅರ್ಧ ಸತ್ಯ ಅಪಪ್ರಚಾರ ಮಾಡೋದು ಕಾಂಗ್ರೆಸ್ ತಂತ್ರ. ಆತ್ಮಾವಲೋಕನ ಮಾಡ್ಬೇಕಿರೋದು ಕಾಂಗ್ರೆಸ್ ಪಕ್ಷ. ಬಿಹಾರ ಎಲೆಕ್ಷನ್ ಟೈಮಲ್ಲಿ ಅವರ ನಾಯಕರು ವಿದೇಶದಲ್ಲಿ ಕುಳಿತು ಕಾಫಿ ಕುಡಿತಿರೋದನ್ನ ನೋಡಿದ್ದೇವೆ. ನಮ್ಮ ನಾಯಕರು ಹಳ್ಳಿ ಹಳ್ಳಿಗೂ ಹೋಗಿ ಕ್ಯಾಂಪೆನ್ ಮಾಡಿದ್ದಾರೆ. ಜನರನ್ನ ಒಂದು ಸಂಪತ್ತು ಅಂದುಕೊಂಡ್ರೆ ಜನ ನಿಮಗೆ ಪಾಠ ಕಲಿಸ್ತಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮಾತಿಗೂ ಬೆಲೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಕರ್ನಾಟಕದಲ್ಲಿ ಬಿಹಾರ ಫಲಿತಾಂಶ ಮರುಕಳಿಸಲಿದೆ : ಎಚ್.ಡಿ.ಕುಮಾರವಸ್ವಾಮಿ
ಇನ್ನು ರಾಜ್ಯದಲ್ಲಿ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 75 ವರ್ಷದಲ್ಲಿ ಕಾಂಗ್ರೆಸ್ ಅಭಿವೃದ್ಧಿಗೆ ದೂರ. ಅಭಿವೃದ್ಧಿ ರಾಜಕಾರಣ ಕಾಂಗ್ರೆಸ್ ಮಾಡಲ್ಲ. ಸಮಾಜ ವಿಭಜನೆ ಮಾಡಿ ಲಾಭ ಪಡೆದುಕೊಳ್ಳಲು ಮುಂದಾಗುತ್ತೆ. ಭಾರತ ಈಗ ಏಕತೆಯಲ್ಲಿ ಮುನ್ನುಗ್ಗುತ್ತಿದೆ. ವಿಕಸಿತ ಭಾರತಕ್ಕೆ ಜನರ ಸ್ಪಂದನೆ ಇದೆ. ದೆಹಲಿ ಮಹಾರಾಷ್ಟ್ರ ಹರಿಯಾಣ, ಬಿಹಾರದಂತೆ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಗ್ಯಾರಂಟಿಗೂ, ಜನರ ಹಿತಕ್ಕಾಗಿ ಯೋಜನೆ ರೂಪಿಸೋದಕ್ಕೂ ವ್ಯತ್ಯಾಸ ಇದೆ. ಹಣಕಾಸಿನ ಮಿತಿಯಲ್ಲಿ ಯೋಜನೆ ರೂಪಿಸಿದ್ರೆ ಒಳ್ಳೇಯದು. ಹಣಕಾಸಿನ ಯೋಜನೆ ರೂಪಿಸಲು ಸಾಮರ್ಥ್ಯ ಇಲ್ಲದ ಸರ್ಕಾರ ಹಣಕಾಸಿನ ಯೋಜನೆ ರೂಪಿಸಿದ್ದಾರೆ. ಈಗಾಗಿ ಗ್ಯಾರಂಟಿ ಕೊಡಲಾಗದ ಪರಿಸ್ಥಿತಿಗೆ ಸರ್ಕಾರ ತಲುಪಿದೆ. ಈ ಸರ್ಕಾರಕ್ಕೆ ಆ ಸಾಮರ್ಥ್ಯ ಇಲ್ಲ ಎಂದು ಹೇಳಿದರು.





