ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆಗಳೊಂದಿಗೆ ಮೈಸೂರಿನಲ್ಲಿ ಬೀಡುಬಿಟ್ಟಿರುವ ಮಾವುತರು ಹಾಗೂ ಕಾವಾಡಿಗರ ಮಕ್ಕಳಿಗೆ ತಾತ್ಕಾಲಿಕ ಶಾಲೆಯನ್ನು ಆರಂಭಿಸಲಾಗಿದೆ.
ಮಾವುತರು ಹಾಗೂ ಕಾವಾಡಿಗರ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅರಮನೆ ಆವರಣದಲ್ಲಿ ಶಾಲೆ ಆರಂಭಿಸಲಾಗಿದ್ದು, 15ಕ್ಕೂ ಹೆಚ್ಚು ಮಕ್ಕಳಿಗೆ ಈ ಶಾಲೆಯಲ್ಲಿ ಪಾಠ ಹೇಳಿಕೊಡಲಾಗುತ್ತಿದೆ.
ಸರ್ಕಾರಿ ಶಾಲೆಯ ನುರಿತ ಶಿಕ್ಷಕಿಯರು ಮಕ್ಕಳಿಗೆ ಶಾಲಾ ಮಠ್ಯಕ್ರಮ ಬೋಧಿಸುತ್ತಿದ್ದು, ಮಧ್ಯಾಹ್ನದ ನಂತರ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ.
ಈ ಬಗ್ಗೆ ಶಿಕ್ಷಕಿಯೇ ಮಾಹಿತಿ ನೀಡಿದ್ದು, ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಪಾಠ ಪ್ರವಚನ ನಡೆಯುತ್ತಿದೆ. ಎಲ್ಲರಂತೆ ಅವರೂ ಕೂಡ ವಿದ್ಯಾವಂತರಾಗಬೇಕು ಎಂದು ಹೇಳಿದರು.





