ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಗೆ ರಾಜಾತಿಥ್ಯ ನೀಡಲಾಗುತ್ತಿದೆ.
ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಸುತ್ತಿವೆ. ಬೆಳಿಗ್ಗೆ ತಾಲೀಮು ನಡೆಸಿದ ಬಳಿಕ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತಿದ್ದು, ಎಲ್ಲಾ ಆನೆಗಳು ಶಾಂತ ರೀತಿಯಲ್ಲಿ ವರ್ತಿಸುತ್ತಿವೆ.
ಮಾವುತರು ಹಾಗೂ ಕಾವಾಡಿಗರು ದಸರಾ ಗಜಪಡೆಯ ಆರೈಕೆಯಲ್ಲಿ ತೊಡಗಿದ್ದು, ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ದಸರಾಗೆ ತಯಾರಿ ನಡೆಸುತ್ತಿವೆ.
ದಿನನಿತ್ಯ ಆನೆಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದ್ದು, ಈಗ ಕೇವಲ ನಡಿಗೆ ತಾಲೀಮು ಮಾತ್ರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಹಂತ ಹಂತವಾಗಿ ತಾಲೀಮು ನಡೆಸಿದ ಬಳಿಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನದಂದು ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಲಿದ್ದಾನೆ.





