ಮೈಸೂರು: ಸಾರಿಗೆ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತವಾಗಿರುವ ಘಟನೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:-ರಾಜ್ಯ ಸರ್ಕಾರಕ್ಕೆ ವೀರೇಂದ್ರ ಹೆಗ್ಡೆ ಧನ್ಯವಾದ ವಿಚಾರ: ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ
ಚಾಮುಂಡಿಬೆಟ್ಟದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಎದುರಿಗೆ ಬರುತ್ತಿದ್ದ ಎರಡು ಕಾರು ಹಾಗೂ ಐದು ವಿದ್ಯುತ್ ಕಂಬಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿದ್ದು, ಐದು ವಿದ್ಯುತ್ ಕಂಬಗಳು ಸಹ ತುಂಡಾಗಿವೆ. ಅಪಘಾತಕ್ಕೆ ಸಾರಿಗೆ ಬಸ್ ಚಾಲಕನ ಅತಿಯಾದ ವೇಗವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಸ್ಸಿನ ಬ್ರೇಕ್ ವೈಫಲ್ಯದಿಂದ ಈ ಅಪಘಾತ ನಡೆದಿದೆ ಎನ್ನಲಾಗಿದ್ದು, ಘಟನೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕೆಎಸ್‌ಆರ್‌ಟಿಸಿ ತಾಂತ್ರಿಕ ಅಧಿಕಾರಿ ವಿಜಯ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ನಡುವೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬವಾದ ಬಗ್ಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಯಿತು. ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





