ಮೈಸೂರು: ಹಾಡು ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಯುವಕರ ಗುಂಪೊಂದು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣ ಎದುರಿನ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕ್ಯಾತಮಾರನಹಳ್ಳಿಯ ವೆಂಕಟೇಶ್ ಅಲಿಯಾಸ್ ಗಿಲ್ಕಿ ವೆಂಕಟೇಶ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಸ್ವೀಫ್ಟ್ ಕಾರಿನಲ್ಲಿ ತೆರಳುತ್ತಿದ್ದ ವೆಂಕಟೇಶ್ ಮೇಲೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕೊಲೆಯಾದ ಗಿಲ್ಕಿ ವೆಂಕಟೇಶ್, ಈ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಜೊತೆಗಿದ್ದ. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಕೊಲೆಯಾದ ಸ್ಥಳದಲ್ಲಿ ವೆಂಕಟೇಶ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದೆ.





