ಮೈಸೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ನಡೆದಿದೆ.
ನಗರದ ಜೆ.ಪಿ.ನಗರದಲ್ಲಿ ಈ ಘಟನೆ ನಡೆದಿದ್ದು, ಬಾರ್ ಬಿಲ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದೆ. ಸಂಜಯ್ ಎಂಬಾತನೇ ಚಾಕು ಇರಿತಕ್ಕೆ ಒಳಗಾಗಿರುವ ಯುವಕನಾಗಿದ್ದು, ರಾಜು ಎಂಬಾತನೇ ಚಾಕು ಇರಿದಿರುವ ಆರೋಪಿಯಾಗಿದ್ದಾನೆ.
ಸಂಜಯ್ ಮತ್ತು ರಾಜು ಇಬ್ಬರು ಹಳೆಯ ಸ್ನೇಹಿತರು. ಹೀಗಿರುವಾಗಲೇ ಬಾರ್ ಬಿಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ರಾಜು ಎಂಬಾತ ಸಂಜಯ್ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.
ಇದನ್ನೂ ಓದಿ:-ಮೈಸೂರು| ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆಸ್ಪತ್ರೆಯಿಂದ ಜೈಲಿಗೆ ಸ್ಥಳಾಂತರಗೊಂಡ ಆರೋಪಿ
ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಚಾಕು ಇರಿದ ರಾಜು ಎಂಬಾತನನ್ನು ಬಂಧಿಸಿದ್ದಾರೆ.
ಸಂಜಯ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





