ಮೈಸೂರು : ಒಳ ಮೀಸಲಾತಿ ವರ್ಗೀಕರಣ ಜಾರಿ ಮಾಡಲು ಸರ್ಕಾರ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನವೆಂಬರ್ 26 ರಂದು ಮುಖ್ಯಮಂತ್ರಿಗಳ ತವರೂರು ಸಿದ್ದರಾಮನಹುಂಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅವರ ಕ್ಷೇತ್ರ ಟಿ.ನರಸೀಪುರದಿಂದ ಮೈಸೂರಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡ ಎಸ್.ಮಾದಪ್ಪ ಹೇಳಿದರು.
ನಗರದ ಚಾಮುಂಡಿ ಗೆಸ್ಟ್‌ನಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಸಿದ್ದರಾಮನ ಹುಂಡಿಯಿಂದ ಆರಂಭವಾಗುವ ಜಾಥಾದಲ್ಲಿ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಎಂಬ ಘೋಷಣೆಯನ್ನು ಕೂಗುವ ಮೂಲಕ ಜಾಥ ನಡೆಸುತ್ತೇವೆ ಎಂದರು.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಚಿವ ಸಂಪುಟ ಅನುಮೋದನೆ ಮಾಡಿದ್ದು ಈ ವಿಷಯವಾಗಿ ಅನವಶ್ಯಕ ಗೊಂದಲ ಸೃಷ್ಟಿಮಾಡಿ ಇಡೀ ಒಳಮಿಸಲಾತಿ ವರ್ಗೀಕರಣ ಪ್ರಕ್ರಿಯೆಯನ್ನು ದೀರ್ಘಕಾಲಿಕ ವಿಳಂಬ ಧೋಷಣೆಗೆ ದೂಡಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: ಒಳಮೀಸಲಾತಿ ಅಳವಡಿಸಿಕೊಂಡು ಕಾಲಬದ್ಧವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಸೂಚನೆ
ಶೀಘ್ರ ಪೂರ್ಣ ಪ್ರಮಾಣದ ಒಳ ಮೀಸ ಲಾತಿ ಜಾರಿ ಮಾಡದಿದ್ದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇವೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಳಮೀಸಲಾತಿ ಪ್ರಕ್ರಿಯೆಯ ದೀರ್ಘ ವಿರೋಧಿ ಹಾಗೂ ಸಾಮಾಜಿಕ ನ್ಯಾಯ ವಿರೋಧ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದು ಕಿಡಿಕಾರಿದರು.
ವಿಳಂಬ ಧೋರಣೆ ಅನುಸರಿಸಿದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಮಂತ್ರಿಯೇ ವಹಿಸಿಕೊಂಡು ಜಾರಿ ಮಾಡಿಸಿ ಇಲ್ಲದಿದ್ದರೆ 35 ವರ್ಷದ ಹೋರಾಟ, ಆಯೋಗದ ವರದಿಗಳು, ಸುಪ್ರೀಂ ಕೋರ್ಟಿನ ಆದೇಶ, ಜನತೆಗೆ ಕೊಟ್ಟಿರುವ ಭರವಸೆ ಎಲ್ಲವನ್ನು ಕೂಡ ಮಾತು ತಪ್ಪಿ ದಂತಾಗುವುದು ಎಂದು ಕಿಡಿಕಾರಿದರು.
ಆನೈತಿಕ ರಾಜಕಾರಣದ ಅಗೋಚರ ಒತ್ತಡವೇ ಮೂಲ ಕಾರಣ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸರ್ಕಾರದ ನಿಲುವು ಸ್ಪಷ್ಟಪಡಿಸಿ ಜಾರಿಯ ಉಪಕ್ರಮಗಳನ್ನು ಪೂರ್ಣಗೊಳಿಸುವುದಾದರೆ ಸರ್ಕಾರಕ್ಕೆ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಸಮಯ ವ್ಯರ್ಥ ಮಾಡುತ್ತಿರುವುದು ಸಾಮಾಜಿಕ ನ್ಯಾಯ ವಿರೋಧಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರನ್ನು ಮೋಸಗೊಳಿಸುವ ಈ ಒಳ ಮೀಸಲಾತಿ ವಿರೋಽ ಆನೈತಿಕ ರಾಜಕಾರಣಕ್ಕೆ ಪಾಠ ಕಲಿಸಬೇಕಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಒಳ ಮೀಸಲಾತಿ ಹೋರಾಟದ ಮುಖಂಡರಾದ ಶಿವರಾಯ ಅಟ್ಟಲಿಕ, ಅಂಬಣ್ಣ ಅರೋಲಿಕ್, ಕನಕೇನಹಳ್ಳಿ ಕೃಷ್ಣಪ್ಪ, ಹೇಮರಾಜ, ಸ್ವಾಮಿ, ಆನಂದ ಕುಮಾರ್, ಹನು ಮೇಶ್, ಬಸವರಾಜ ಕಾತಾಳ್, ರಾಜಣ್ಣ ಇದ್ದರು.





