ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ವಿಜಯನಗರ 4ನೇ ಹಂತದಲ್ಲಿ ನೆಲೆಸಿರುವ ೪೯ ವರ್ಷದ ವೈದ್ಯರೊಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಟ್ರಾಯ್ ನೋಟಿಫಿಕೇಷನ್ ವಿಭಾಗದ ಪಿಆರ್‌ಒ ಎಂ.ವಿ.ಅಮಿತ್ ಈ ಶ್ಯಾಂ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿರುವ ಸಿಮ್ ಅಪರಾಧ ಕೃತ್ಯಗಳಲ್ಲಿ ಬಳಕೆಯಾಗಿದ್ದು, ಈ ಬಗ್ಗೆ ಮುಂಬೈನ ಬಾಂಧ್ರಾ ಪೊಲೀಸ್ ಠಾಣೆಗೆ ಕರೆ ಮಾಡಿ, ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾನೆ. ಬಳಿಕ ಆತ ನೀಡಿದ ನಂಬರ್‌ಗೆ ವೈದ್ಯ ವಿಡಿಯೋ ಕರೆ ಮಾಡಿದಾಗ ಕಚೇರಿಯಲ್ಲಿ ಕುಳಿತಿದ್ದ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಮಾತನಾಡಿದ್ದಾನೆ.
ನಿಮ್ಮ ಹೆಸರಿನಲ್ಲಿ ಅಶ್ಲೀಲ ವಿಡಿಯೋ ಹಾಗೂ ಕಾನೂನುಬಾಹಿರ ಜಾಹೀರಾತು ಕಳುಹಿಸಿ ಮುಂಬೈನ ಸಾರ್ವಜನಿಕರಿಗೆ ಬೆದರಿಕೆ ಕರೆ ಮಾಡುತ್ತಿರುವುದಾಗಿ ತಿಳಿಸಿ, ಬೆದರಿಸಿದ್ದಾನೆ. ಬಳಿಕ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದು, ಅದರಲ್ಲಿ 2 ಕೋಟಿ ರೂ. ಚಲಾವಣೆ ಮಾಡಲಾಗಿದೆ. ನಿಮ್ಮ ಮೇಲ್ ಐಡಿಯನ್ನೂ ಬಳಸಲಾಗಿದೆ.
ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ನಿಮಗೆ ಮತ್ತು ನಿಮ್ಮ ಪತ್ನಿಗೆ ಅರೆಸ್ಟ್ ವಾರೆಂಟ್ ಆಗಿದೆ ಎಂದು ಮತ್ತಷ್ಟು ಹೆದರಿಸಿದ್ದಾನೆ. ನಂತರ ನಿಮ್ಮ ಹಣ ಹಾಗೂ ಆಸ್ತಿಯನ್ನು ಪರಿಶೀಲಿಸಿದ ನಂತರ ಎನ್‌ಒಸಿ ನೀಡುವುದಾಗಿ ಹೇಳಿ, ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ.
ವಂಚಕನನ್ನು ನಿಜವಾದ ಪೊಲೀಸ್ ಎಂದು ನಂಬಿದ ವೈದ್ಯ, ಆತ ಕಳುಹಿಸಿದ್ದ ಮೂರು ಖಾತೆಗಳಿಗೆ ಒಟ್ಟು ೮೨ ಲಕ್ಷ ರೂ. ವರ್ಗಾವಣೆ ಮಾಡಿ ಮೋಸ ಹೋಗಿದ್ದಾನೆ. ಈ ಸಂಬಂಧ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತರಿಗೆ ೫ ಲಕ್ಷ ರೂ. ವಂಚನೆ
ನಗರದ ವಿದ್ಯಾರಣ್ಯಪುರಂನ ೭೧ ವರ್ಷದ ನಿವೃತ್ತರೊಬ್ಬರಿಗೆ ಡಿ.೫ ರಂದು ಅಪರಿಚಿತ ಕರೆ ಮಾಡಿ, ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ. ಅರೆಸ್ಟ್ ಮಾಡದಿರಲು ನೀವು ಫೀಸ್ ಕಟ್ಟಬೇಕಾಗುತ್ತದೆ ಎಂದು ಹೇಳಿ ೫ ಲಕ್ಷ ರೂ. ವರ್ಗಾವಣೆ ಮಾಡಿಸಿ ಕೊಂಡು ವಂಚಿಸಿದ್ದಾನೆ. ಈ ಸಂಬಂಧ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





