ಮೈಸೂರು: ಜಿಲ್ಲೆಯ ತಿ.ನರಸೀಪುರದಲ್ಲಿರುವ ಕಾವೇರಿ, ಕಪಿಲಾ ನದಿ ಹಾಗೂ ಸ್ಫಟಿಕ ಸರೋವರಗಳ
ತ್ರಿವೇಣಿ ಸಂಗಮದ ಪುಣ್ಯ ಕ್ಷೇತ್ರವಾದ ತಿರುಮಕೂಡಲಿನಲ್ಲಿ 12ನೇ ಮಹಾಕುಂಭಮೇಳವನ್ನು 2025ರ ಫೆಬ್ರವರಿ 10 ರಿಂದ 12 ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಇಂದು(ಡಿಸೆಂಬರ್.26) ಸುದ್ದಿಗೋಷ್ಠಿಸಿ ಮಾತನಾಡಿದ ಅವರು, ಆರು ವರ್ಷಗಳ ಬಳಿ ಜರುಗುತ್ತಿರುವ ದಕ್ಷಿಣದ ಪ್ರಯಾಗರಾಜ್ ಎಂದೇ ಖ್ಯಾತಿಗಳಿಸಿರುವ ತಿರುಮಲಕೂಡಲಿನಲ್ಲಿ 12ನೇ ಮಹಾಕುಂಭಮೇಳವೂ 2025ರ ಫೆಬ್ರವರಿ 10 ರಿಂದ ನಡೆಯಲಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇರುವುದರಿಂದ ಈಗಿನಿಂದಲೇ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಠಾಧೀಶರ ಬಳಗ ಪೂರ್ವಸಿದ್ಧತೆಯನ್ನು ಆರಂಭಿಸಲಾಗಿದೆ ಎಂದಿದ್ದಾರೆ.
ಈ ಮಹಾಕುಂಭ ಮೇಳವನ್ನು ಪ್ರತಿ 3 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದ್ದು, ಈ ಮುಂಚೆ 2019ರಲ್ಲಿ ಕಾರ್ಯಕ್ರಮ ಜರುಗಿತ್ತು. ಬಳಿಕ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾಕುಂಭಮೇಳವನ್ನು ರದ್ದುಗೊಳಿಸದ ಕಾರಣ ಅಯೋಜನೆ ಮಾಡಿರಲಿಲ್ಲ. ಆದರೆ ಇದೀಗ 2025ರ ಫೇಬ್ರವರಿಯಲ್ಲಿ ಆಯೋಜನೆ ಮಾಡಲಾಗುತ್ತಿದ್ದು, ಸಿದ್ಧತೆಯ ಕುರಿತು ಚರ್ಚಿಸಲಾಗಿದೆ. ಅಲ್ಲದೇ ಸಕಲ ಸಿದ್ಧತೆಯ ಜವಾಬ್ದಾರಿಯನ್ನು ಹಂಚಿಕೆ ಮಾಡುವುದರ ಜೊತೆಗೆ ರಾಜ್ಯ ಸರ್ಕಾರ ಸಹಕಾರವನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.
ಇನ್ನು 12ನೇ ಮಹಾಕುಂಭಮೇಳದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ, ಮಹಾಕುಂಭಮೇಳ ಜರುಗುವ ಸ್ಥಳಕ್ಕೆ ಶೀಘ್ರದಲ್ಲೇ ಭೇಟಿ ಮಾಡಿ, ಸ್ಥಳವನ್ನು ಪರಿಶೀಲಿಸಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂಬುದನ್ನು ಚರ್ಚಿಸಬೇಕು. ಅಲ್ಲದೇ ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.