ಮೈಸೂರು: ಮೈಸೂರು ನಗರ ಪೊಲೀಸ್ ಸ್ವತ್ತು ಕಳುವು ಪ್ರಕರಣಗಳನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಇಂದು ನಗರ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯ ಸರಸ್ವತಿಪುರಂ, ಕುವೆಂಪುನಗರ, ಲಷ್ಕರ್, ವಿದ್ಯಾರಣ್ಯಪುರಂ, ವಿಜಯನಗರ, ಮೇಟಗಳ್ಳಿ, ಮಂಡಿ ಹಾಗೂ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕಳುವು ಪ್ರಕರಣಗಳಲ್ಲಿ 2 ಕೆಜಿ 50 ಗ್ರಾಂ ಚಿನ್ನ, 5 ಕೆಜಿ 312 ಗ್ರಾಂ ಬೆಳ್ಳಿ ಪದಾರ್ಥಗಳು, 57 ವಿವಿಧ ಬಗೆಯ ವಾಹನಗಳು ಸೇರಿದಂತೆ ಒಟ್ಟು ₹2,96,36,000 ಮೌಲ್ಯದ ಚಿನ್ನಾಭರಣ ಹಾಗೂ ₹10,03,000 ನಗದು ಸೇರಿದಂತೆ ಇತರೆ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
2026ನೇ ಸಾಲಿನಲ್ಲಿ 22 ಎನ್‌ಡಿಪಿಎಸ್ ಕಾಯ್ದೆಯ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಪೈಕಿ 30 ಕೆಜಿ 250 ಗ್ರಾಂ ಗಾಂಜಾ ಮತ್ತು 311 ಗ್ರಾಂ 579 ಮಿಲಿಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಹಲವಾರು ಪ್ರಕರಣಗಳಲ್ಲಿ ಆರೋಪಿಗಳು ಆಧುನಿಕ ತಂತ್ರಜ್ಞಾನ, ಸ್ಯಾಟಲೈಟ್ ಮೂಲಕ ಒಂಟಿ ಮನೆಗಳನ್ನು ಪತ್ತೆಹಚ್ಚಿ ಕಳ್ಳತನ ಮಾಡಿರುವುದು ಹಾಗೂ ಪರಿಚಯಸ್ಥರಂತೆ ನಂಬಿಸಿ ಚಿನ್ನಾಭರಣ ಕಳವು ಮಾಡಿರುವುದು ಪತ್ತೆಯಾಗಿದೆ. ಇಂತಹ ಎಲ್ಲಾ ಪ್ರಕರಣಗಳನ್ನು ಬೇಧಿಸುವಲ್ಲಿ ಮೈಸೂರು ನಗರ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣಗಳನ್ನು ಬೇಧಿಸಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾಪತ್ರ ನೀಡಿ ಅಭಿನಂದಿಸಲಾಗಿದೆ.
ಈ ವೇಳೆ ಮೈಸೂರು ನಗರ ಉಪ ಪೊಲೀಸ್ ಆಯುಕ್ತರಾದ ಸುಂದರ್ ರಾಜ್, ರವಿ ಪ್ರಸಾದ್ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲಿನಲ್ಲಿ ಕಾರು ಕಳುವಾಗಿದ್ದ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಲ್ಲಿ ದೂರು ನೀಡಿದ್ದೆ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಕಾರನ್ನು ವಶಪಡಿಸಿಕೊಂಡು ಹಿಂತಿರುಗಿಸಲು ಮುಂದಾಗಿದ್ದಾರೆ. ಕಳುವಾಗಿದ್ದ ಕಾರು ಮರಳಿ ಸಿಕ್ಕಿದ್ದು ಸಂತಸ ತಂದಿದೆ ಎಂದು ಮಹಿಳೆ ರಾಣಿ ತಿಳಿಸಿದ್ದಾರೆ.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಸಮೀಪ ಕ್ಷಣಾರ್ಧದಲ್ಲಿ ಆಟೋ ಕಳುವಾಗಿತ್ತು. ದೂರು ನೀಡಿದ ನಂತರ ಲಷ್ಕರ್ ಪೊಲೀಸರು ಪತ್ತೆಹಚ್ಚಿ ಆಟೋ ಹಿಂತಿರುಗಿಸಿದ್ದಾರೆ. ಕೂಲಿ ಮಾಡಿ ಬದುಕುವ ನಮ್ಮಂತಹವರಿಗೆ ಆಟೋ ಮರಳಿ ಸಿಕ್ಕಿರುವುದು ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಆಟೋ ಚಾಲಕ ರವಿ ತಿಳಿಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದ ಮುಂದೆ ಸಹಾಯ ಕೇಳಿದ ನೆಪದಲ್ಲಿ ಹಲ್ಲೆ ಮಾಡಿ ಕಾರು ಮತ್ತು ಚಿನ್ನಾಭರಣ ಕಿತ್ತುಕೊಂಡಿದ್ದರು. ಕೇವಲ 48 ಗಂಟೆಗಳಲ್ಲಿ ಪೊಲೀಸರು ಪ್ರಕರಣವನ್ನು ಬೇಧಿಸಿ ಕಾರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ಆಕಾಶ್ ಆದಿತ್ಯ ತಿಳಿಸಿದ್ದಾರೆ.





