ಮೈಸೂರು : ನಗರದ ರೈಲ್ವೆ ನಿಲ್ದಾಣದ ಬಳಿ ತಾಯಿ ಜೊತೆ ಮಲಗಿದ್ದ ಮಗುವನ್ನು ಅಪಹರಣ ಮಾಡಿದ್ದ ವೃದ್ಧೆಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ…
ರೈಲ್ವೆ ನಿಲ್ದಾಣದ ಬಳಿ ತಾಯಿ ಜೊತೆ ಮಲಗಿದ್ದ ಮಗುವನ್ನು ವೃದ್ಧೆಯೊಬ್ಬರು ಅಪಹರಣ ಮಾಡಿದ್ದಾರೆ. ತಾಯಿ ಎಚ್ಚರಗೊಂಡಾಗ ಪಕ್ಕದಲ್ಲಿ ಮಲಗಿದ್ದ ಮಗು ನಾಪತ್ತೆಯಾಗಿದ್ದನ್ನು ಗಮನಿಸಿ, ಕೂಡಲೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಮೈಸೂರಿನಲ್ಲಿ ಭ್ರೂಣಲಿಂಗ ಪತ್ತೆ ಸೆಂಟರ್ ಮೇಲೆ ದಾಳಿ: ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದ್ದಿಷ್ಟು.!
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಕಾರ್ಯಾರಂಭ ಮಾಡಿದಾಗ, ೫೦ ವರ್ಷದ ವೃದ್ಧೆ ಮಗು ಎತ್ತಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಕೂಟಲೇ ರೈಲ್ವೇ ನಿಲ್ದಾಣದಲ್ಲಿಯೇ ಇದ್ದ ವೃದ್ಧೆಯನ್ನು ಬಂಧಿಸಿ ಮಗು ವಶಕ್ಕೆ ಪಡೆದ ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಆರೋಪಿ ಹಾಸನ ಮೂಲದ ನಂದಿನಿ ಎಂದು ಗುರುತು ಪತ್ತೆಯಾಗಿದ್ದು, ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





