Mysore
26
broken clouds
Light
Dark

ಮೈಸೂರು: ನಡು ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಲಾರಿ

ಮೈಸೂರು: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಹಿನ್ನೆಲೆ ಕಲ್ಲಿದ್ದಲು ತುಂಬಿದ ಲಾರಿ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದವರು ಸಮಯಕ್ಕೆ ಬಂದು ಬೆಂಕಿ ನಂದಿಸಿದ ಘಟನೆ ಮೈಸೂರು ಹುಣಸೂರು ರಸ್ತೆಯ ಹೂಟಗಳ್ಳಿಯ ಬಡಾವಣೆಯಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ 18 ಚಕ್ರದ ಬೃಹತ್ ಲಾರಿ ತಮಿಳುನಾಡಿನ ತೂತುಕುಡಿಯಿಂದ ಕುಶಾಲನಗರಕ್ಕೆ ಕಲ್ಲಿದ್ದಲು ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ ಲಾರಿಯಲ್ಲಿ ಏಕಾಏಕಿ ತಾಂತ್ರಿಕ ದೋಷದಿಂದ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಅಂತೋಣಿ ಲಾರಿಯನ್ನು ನಡುರಸ್ತೆಯಲ್ಲೇ ನಿಲ್ಲಿಸಿ ಕೆಳಗೆ ಇಳಿದಿದ್ದಾರೆ.

ಅಷ್ಟೊತ್ತಿಗಾಗಲೇ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಲಾರಿ ಸಂಪೂರ್ಣ ಸುಟ್ಟು ನಾಶವಾಗುವುದು ತಪ್ಪಿದೆ. ವಿಜಯನಗರ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.