ಮೈಸೂರು: ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ಅಧಿಕಾರಿಗಳು ತನಿಖೆ ನಡೆಸುತ್ತಿದ್ದು 631 ಸೈಟ್‌ಗಳು ಬೇನಾಮಿ ಆಸ್ತಿಯ ಭ್ರಷ್ಟಾಚಾರ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಮುಡಾ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಅಕ್ರಮಗಳು ಹೆಚ್ಚಾಗುತ್ತಿದ್ದು, ಇ.ಡಿ.ತನಿಖಾ ಸಂಸ್ಥೆಯೂ 142 ನಿವೇಶನಗಳ ಬಗ್ಗೆ ಈಗಾಗಲೇ ತನಿಖೆ ನಡೆಸಿದೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಮುಡಾದಲ್ಲಿ 631 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇ.ಡಿ.ಅಧಿಕಾರಿಗಳು ಮುಡಾ ಕಚೇರಿಯಲ್ಲಿಯೇ ತನಿಖೆಯನ್ನು ಮುಂದುವರೆಸಿದ್ದು, 2024ರ ಡಿಸೆಂಬರ್ 12ರಂದು ದಾಖಲೆ ಆಧಾರದಲ್ಲಿ ಪತ್ರ ಬರೆದು ನಿವೇಶನಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದರು.
ಇನ್ನೂ ಮುಡಾದಿಂದ 631 ನಿವೇಶನಗಳನ್ನು ಅಕ್ರಮವಾಗಿ ಖರೀದಿಸುವಾಗ ಕಪ್ಪು ಹಣವನ್ನು ವರ್ಗಾಯಿಸಿ ವಹಿವಾಟು ಮಾಡಲಾಗಿದೆ ಎಂಬ ಅಂಶ ಹೊರ ಬಿದ್ದಿದೆ. ಆದರೆ ಈ ನಿವೇಶನಗಳು ಬೇನಾಮಿ ಆಸ್ತಿಯಾಗಿವೆ ಎಂದು ಇ.ಡಿ. ಅಧಿಕಾರಿಗಳು ವರದಿ ಮಾಡಿದ್ದು, 128 ನಿವೇಶನಗಳು ಹಾಲಿ ವಿಧಾನ ಪರಿಷತ್ ಸದಸ್ಯ, ಯೋಜನಾ ಅಧಿಕಾರಿಗೆ 92 ಹಾಗೂ 198 ನಿವೇಶನಗಳು ಮಾಜಿ ಆಯುಕ್ತರ ಹೆಸರಿನಲ್ಲಿವೆ. ಅಲ್ಲದೇ ಈ ಎಲ್ಲಾ ನಿವೇಶನಗಳು ಸಹ ಅಧಿಕಾರಿಗಳಿಗೂ ಮತ್ತು ನಾಯಕರಿಗೇ ಸೇರಿದ್ದವಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮುಡಾ ಅಧಿಕಾರಿಗಳಿಗೆ ಅಕ್ರಮ ಹಣ ವರ್ಗಾವಣೆ ಹಾಗೂ ಸಂಪೂರ್ಣ ಆಸ್ತಿ ವಿವರದ ಬಗ್ಗೆ ವರದಿ ನೀಡುವಂತೆ ಇ.ಡಿ.ತನಿಖಾ ಸಂಸ್ಥೆ ತಿಳಿಸಿದೆ.