ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತಪ್ಪಿತಸ್ಥರಿಗೆ ಸರ್ಚ್ ವಾರೆಂಟ್ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇ-ಮೇಲ್ ಮೂಲಕ ರಾಜ್ಯಪಾಲರಿಗೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಲೋಕಾಯುಕ್ತ ಅಧಿಕಾರಿಗಳು, ಸಚಿವ ಭೈರತಿ ಸುರೇಶ್, ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಬಗಲಿ, ಮುಡಾದ ಹಳೆಯ ಆಯುಕ್ತರಾದ ನಟೇಶ್ ಮತ್ತು ದಿನೇಶ್ ವಿರುದ್ಧ ರಾಜ್ಯಪಾಲರಿಗೆ ಇ-ಮೇಲ್ ಮತ್ತು ಅಂಚೆ ಪತ್ರದ ಮುಖಾಂತರ ದೂರು ಸಲ್ಲಿಕೆ ಮಾಡಿದ್ದಾರೆ.
ಈ ಬಗ್ಗೆ ದೂರುದಾರ ಗಂಗರಾಜು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಹಿಂದೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಒಂದು ಸಾವಿರ ಪುಟಗಳಷ್ಟು ದಾಖಲೆ ಸಂಗ್ರಹಿಸಿದ್ದರು. ಅಲ್ಲದೇ ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡ ಸಾಕ್ಷಿಯನ್ನು ಕೂಡ ಸಂಗ್ರಹಿಸಿತ್ತು. ನಂತರ ಅಂದಿನ ಲೋಕಾಯುಕ್ತ ಎಸ್‌ಪಿಗೆ ಸರ್ಚ್ ವಾರೆಂಟ್ ನೀಡಲು ಮನವಿ ಸಲ್ಲಿಸಲಾಗಿತ್ತು. ಆದರೆ, ಎಸ್‌ಪಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿ ಸರ್ಚ್ ವಾರೆಂಟ್ ನೀಡಿದ್ದರು. ಕೆಲವು ಅಧಿಕಾರಿಗಳಿಂದ ಸರ್ಕಾರಕ್ಕೆ ಈ ಮಾಹಿತಿ ಸೋರಿಕೆಯಾಗಿತ್ತು. ಹೀಗಾಗಿ ಸಚಿವ ಭೈರತಿ ಸುರೇಶ್ ಅವರು ಆ ಸಂದರ್ಭದಲ್ಲಿ ಮುಡಾದಿಂದ ಬೆಂಗಳೂರಿಗೆ ಕಡತಗಳನ್ನು ತರಿಸಿಕೊಂಡಿದ್ದಾರೆ. ಅದಕ್ಕೆ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.