Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ಭೈರಪ್ಪ ನಿಧನಕ್ಕೆ ಎಂಎಲ್‌ಸಿ ಶಿವಕುಮಾರ್‌ ಕಂಬನಿ

ಮೈಸೂರು : ನಾಡಿನ ಶ್ರೇಷ್ಠ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.

ಕನ್ನಡದ ಬಗ್ಗೆ ಭೈರಪ್ಪ ಅವರದು ಅಗಾಧವಾದ ಪ್ರೀತಿ ಹಾಗೂ ಬದ್ಧತೆ. ಸೈದ್ಧಾಂತಿಕವಾಗಿ ಅವರ ನಿಲುವುಗಳನ್ನು ವಿರೋಧಿಸಬಹುದಿತ್ತು. ಆದರೆ, ಅವರ ಅನುಭವದ ಗಟ್ಟಿ ಬರವಣಿಗೆ, ಅನುಭವಿಸಿ ಬರೆಯುವ ವಿಧಾನ, ಪಾಂಡಿತ್ಯ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಯಾರಾದರೂ ತಲೆಬಾಗಲೇಬೇಕಿತ್ತು. ಭೈರಪ್ಪ ಅವರಿಗೆ ಅಪಾರ ಓದುಗ ಅಭಿಮಾನಿ ಬಳಗವಿತ್ತು. ಅವರು ಯಾವುದೇ ಕೃತಿ ರಚಿಸಿದರೂ ಮೊದಲು ಅಧ್ಯಯನ, ಸಂಶೋಧನೆ ಮಾಡುತ್ತಿದ್ದರು. ಕ್ಷೇತ್ರ ಕಾರ್ಯ ಮಾಡುತ್ತಿದ್ದರು. ನಂತರ ಬರವಣಿಗೆಯಾಗಿತ್ತು. ಅವರೊಬ್ಬರು ಸ್ಟಾರ್ ಕಾದಂಬರಿಕಾರರಾಗಿದ್ದರು. ದೇಶ-ವಿದೇಶಗಳ ಅನೇಕ ಭಾಷೆಗಳಿಗೆ ಅವರ ಕಾದಂಬರಿಗಳು ತರ್ಜುಮೆಗೊಂಡಿರುವುದು ದಾಖಲೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:-ಚಾಮುಂಡಿ ಗುಡಿಯಲ್ಲಿಲ್ಲ, ಹೋರಾಡುವ ಮಹಿಳೆಯರಲ್ಲಿದ್ದಾಳೆ : ನಾಗಲಕ್ಷ್ಮಿ ಬಣ್ಣನೆ

ಭೈರಪ್ಪನವರದು ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವ. ಇಡೀ ಕರ್ನಾಟಕದ ಜನಮಾನಸವನ್ನು ಆವರಿಸಿದ ವ್ಯಕ್ತಿ ಅವರಾಗಿದ್ದರು. ಕಡುಬಡತನದಲ್ಲಿ ಬೆಳೆದ ಅವರು ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡಜನರ ಕಲ್ಯಾಣಕ್ಕಾಗಿ ದಾನ ಮಾಡುತ್ತಿದ್ದರು. ತಮಗೆ ಬಂದ ಪ್ರಶಸ್ತಿಗಳ ಮೊತ್ತವನ್ನೂ ಸದ್ವಿನಿಯೋಗ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಟ್ರಸ್ಟ್ ಸ್ಥಾಪಿಸಿ ತಮ್ಮ ಪುಸ್ತಕಗಳ ರಾಯಲ್ಟಿಯ ಹಣವನ್ನು ಅದಕ್ಕೆ ಕೊಟ್ಟಿದ್ದರು ಎಂದು ಶಿವಕುಮಾರ್ ನೆನಪಿಸಿಕೊಂಡಿದ್ದಾರೆ.

ಪತ್ರಕರ್ತನಾಗಿ ಅನೇಕ ಬಾರಿ ಭೈರಪ್ಪ ಅವರನ್ನು ಭೇಟಿ ಮಾಡಿ ಮಾತಾಡಿಸಿದ್ದೇನೆ. ಅವರ ಸಭೆ, ಸಮಾರಂಭಗಳನ್ನು ವರದಿ ಮಾಡಿದ್ದೇನೆ. ಅವರ ವಿಚಾರಗಳಲ್ಲಿ ಬಹಳ ಸ್ಪಷ್ಟತೆ ಇತ್ತು. ನಿಲುವು ಧೃಡವಾಗಿತ್ತು. ವಿವಾದಗಳಿಗೆ ಅವರು ಹೆದರುತ್ತಿರಲಿಲ್ಲ. ತಮ್ಮ ಅಭಿಪ್ರಾಯಗಳನ್ನು ಮುಂದಿಡಲು ಹಿಂಜರಿಯುತ್ತಿರಲಿಲ್ಲ ಎಂದು ಶಿವಕುಮಾರ್ ಮೆಲುಕು ಹಾಕಿದ್ದಾರೆ.

Tags:
error: Content is protected !!