ಮೈಸೂರು : ಮೇಲ್ವರ್ಗದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೆ ಹೆತ್ತ ಅಪ್ಪ-ಅಮ್ಮ-ಅಣ್ಣಂದಿರು ಕೊಲೆ ಮಾಡುವ ಕ್ರೌರ್ಯಕ್ಕೆ ಮನುಸ್ಮೃತಿ ಮತ್ತು ಪುರಾಣಗಳಲ್ಲಿನ ನಿಯಮಗಳೇ ಕಾರಣ ಎಂದು ಚಿಂತಕ ಶಿವಸುಂದರ್ ಪ್ರತಿಪಾದಿಸಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ಸಹಯೋಗದಲ್ಲಿ ೯೮ನೇ ವರ್ಷದ ಮನುಸ್ಮೃತಿ ದಹನ ದಿನದ ಅಂಗವಾಗಿ ಗುರುವಾರ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಮಾನ್ಯ ಎನ್ನುವ ಹುಡುಗಿ ದಲಿತ ಸಮುದಾಯದ ವಿವೇಕಾನಂದನನ್ನು ವರಿಸಿ ಹಳ್ಳಿಗೆ ವಾಪಸ್ ಬಂದ ಗರ್ಭೀಣಿ ಮಗಳನ್ನು ಹೆತ್ತ ಅಪ್ಪ-ಅಮ್ಮ-ಅಣ್ಣಂದಿರೇ ಪೈಶಾಚಿಕವಾಗಿ ಕೊಲೆ ಮಾಡಿದ್ದಾರೆ. ಹೆತ್ತ ಮಗಳನ್ನು ಕೊಲ್ಲುವ ಕ್ರೌರ್ಯ ಇವರಿಗೆ ಎಲ್ಲಿಂದು ಬಂತು. ಮೇಲ್ವರ್ಗದ ಹುಡುಗಿ ತಳ ಸಮುದಾಯದ ಹುಡುಗನ್ನು ಮದುವೆಯಾದದ್ದು ಮಹಾ ಅಪರಾಧ ಎನ್ನುವ ಮನಸ್ಥಿತಿಯಿಂದ. ಈ ಘಟನೆಯಾದ ಮೇಲೆಯೂ ದೇಶದಲ್ಲಿ ಮನುಸ್ಮೃತಿ ಸತ್ತಿದೆ ಎನ್ನುವುದು ಹೇಗೆ? ಸಂವಿಧಾನದಿಂದ ಮನುಸ್ಮೃತಿಯನ್ನು ಸೋಲಿಸಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನು ಓದಿ: ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿ | ರಾಹುಲ್ ಗಾಂಧಿ ಹಾಗೂ ಅಶ್ವಿನ್ ವೈಷ್ಣವ್ ನಡುವೆ ಟ್ವಿಟ್ ವಾರ್…
ಮೇಲ್ವರ್ಗಕ್ಕೆ ಸೇರಿದ ಗಂಡಸು ತಳ ಸಮುದಾಯದ ಮಹಿಳೆಯನ್ನು ಮದುವೆಯಾಗಿ ಮಕ್ಕಳನ್ನು ಹಡೆದರೆ ತಪ್ಪಿಲ್ಲ. ಆದರೆ, ಕೆಳ ವರ್ಗದ ಪುರುಷ-ಮೇಲ್ವರ್ಗದ ಮಹಿಳೆಯೊಂದಿಗೆ ಮದುವೆಯಾಗಿ ಮಕ್ಕಳಾದರೆ ಮಹಾ ಅಪರಾಧ ಸೇರಿದಂತೆ ನಾವು ಮನೆ ಹಾಗೂ ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಯಾರು ಅಧಿಕಾರ ಅನುಭವಿಸಬೇಕು, ಯಾವುದಕ್ಕೆ ಯಾವ ಶಿಕ್ಷೆ, ಅಪರಾಧ, ಎಂಬುದನ್ನು ಮನುಸ್ಮೃತಿಯ ೧೨ನೇ ಅಧ್ಯಾಯ ಬಣ್ಣಿಸಿ ವಿವರಿಸಿದೆ. ಇದೇ ನಿಯಮಗಳು ನಮ್ಮನ್ನು ಮೂರು ಸಾವಿರ ವರ್ಷಗಳಿಂದ ಆಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮನುಸ್ಮೃತಿಯ ಪ್ರತಿ ಮಾತಿನಲ್ಲಿ ಬ್ರಹ್ಮನ ಆದೇಶವೆಂದು ಉಲ್ಲೇಖಿಸಲಾಗಿದೆ. ರಾಮಾಯಾಣದಲ್ಲಿ ಶಂಭುಕ ವಧೆ, ಸೀತೆಯ ಪಾವಿತ್ರ್ಯತೆ, ವಾಲಿಯ ಅಧೀನ ಪಡಿಸಿಕೊಂಡ ಘಟನೆಗಳು ಮನುಸ್ಮೃತಿಯ ನಿಯಮದ ಪಾಲನೆ. ಹೀಗಾಗಿ ಜಾತಿಯೇ ಕಾನೂನು, ಜಾತಿ ಧರ್ಮ, ಜಾತಿಯೇ ನಿಯಮವಾಗಿದೆ. ನಾವು ಜಾತಿ ವಿನಾಶ ಮೊದಲು ಮಾಡಬೇಕು. ಇದನ್ನು ಹೇಗೆ ಮಾಡುವುದು ಎಂದು ಜಾತಿ ವಿನಾಶ ಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬರೆದಿದ್ದಾರೆ. ಜಾತಿ ವಿನಾಶಕ್ಕೆ ಪಣತೊಟ್ಟವರು ಮೊದಲು ಆ ಪುಸ್ತಕ ಓದಬೇಕು ಎಂದು ಹೇಳಿದರು.
ಶ್ರೀ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಹಿರಿಯ ಸಂಸ್ಕೃತಿ ಚಿಂತಕ ಕಾಳೇಗೌಡ ನಾಗವಾರ, ಹಿರಿಯ ರಂಗಕರ್ಮಿ ಎಚ್.ಜನಾರ್ಧನ್ ಜನ್ನಿ, ಲೇಖಕ ಸಿ.ಹರಕುಮಾರ್, ಎಸ್‌ಸಿ-ಎಸ್‌ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಹಿರಿಯ ದಲಿತ ಹೋರಾಟಗಾರ ಹರಿಹರ ಆನಂದಸ್ವಾಮಿ, ವಕೀಲ ತಿಮ್ಮಯ್ಯ, ಮೈಸೂರು ವಿವಿ ಸಂಶೋಧಕರ ಸಂಘದ ಗೌರವಾಧ್ಯಕ್ಷ ಕಲ್ಲಳ್ಳಿ ಕುಮಾರ್ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.





