ಮೈಸೂರು: ಬಹುಶಿಸ್ತೀಯ ವಿಷಯಗಳನ್ನು ಕಲಿಯುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿ ವೃದ್ಧಿಸುವುದಲ್ಲದೇ ಭವಿಷ್ಯದ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕೇರಳದ ಕೇಂದ್ರೀಯ ವಿವಿಯ ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್‌ನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ಶಿವಕುವಾರ್ ತಿಳಿಸಿದರು.
ನಗರದ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿರುವ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಮತ್ತು ಸವಾಲುಗಳು ವಿಷಯದ ಕುರಿತಾಗಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೇ ಯಾವ ಕೆಲಸ ಕಾರ್ಯವೂ ಪರಿಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮೂಲಭೂತ ವಿಷಯಗಳು ಮತ್ತು ತಾತ್ವಿಕತೆಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ಪ್ಲ್ಯಾಸ್ಟಿಕ್ ವಸ್ತುಗಳನ್ನು ಅತಿಯಾಗಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಪರಿಸರ ಮತ್ತು ಜೀವ ವೈವಿದ್ಯತೆಯ ಮೇಲೆ ಅಪಾರ ಹಾನಿ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ಲ್ಯಾಸ್ಟಿಕ್ ವಸ್ತುಗಳಿಂದ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಬೇಕಾದರೆ, ಬಹುಬೇಗ ಮಣ್ಣಿನಲ್ಲಿ ಕರಗಿಹೋಗುವ ಜೈವಿಕ ಪ್ಲ್ಯಾಸ್ಟಿಕ್ ಪದಾರ್ಥಗಳ ಬಳಕೆಗೆ ಎಲ್ಲರೂ ಮುಂದಾಗಬೇಕು. ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳು ಜೈವಿಕ ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಳಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಭಾರತಿ, ಐಕ್ಯೂಎಸಿ ಸಂಯೋಜಕರಾದ ಸುಕೃತಾ, ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎನ್.ಚೈತ್ರಾ, ರಾಸಾಯಣಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿ.ಪವಿತ್ರ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಚೈತ್ರಾ ಮಲ್ಲು, ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪಲ್ಲವಿ ಅಂಗಡಿ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಿ.ನಮ್ರತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.