ಮೈಸೂರು: ರಾಜ್ಯ ಪೊಲೀಸ್ ಇಲಾಖೆಗೆ ಕಾನೂನು ಅಷ್ಟೇ ಮುಖ್ಯ, ಅವರನ್ನು ಯಾರಿಂದಲೂ ಕುಗ್ಗಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಹೇಳಿಕೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅವಹೇಳನಕಾರಿ ಪೋಸ್ಟ್ ಸಂಬಂಧ, ಇಂದು ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಘಟನೆಯಲ್ಲಿ ಯಾರೇ ಇದ್ದರೂ ಶಿಕ್ಷೆ ಆಗುತ್ತೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ. ಈ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. ತನಿಖೆಗೆ ಆದೇಶ ಮಾಡಿರುವುದರಿಂದ ಇದರ ಹಿಂದೆ ಯಾರಿದ್ದಾರೆ, ಏನೆಲ್ಲಾ ಚರ್ಚೆ ಆಗಿದೆ ಅದೆಲ್ಲ ಹೇಳೋಕೆ ಆಗೋದಿಲ್ಲ. ಪೊಲೀಸ್ ಠಾಣೆಗೆ ಕಲ್ಲು ತೂರಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಉತ್ತರ ಪ್ರದೇಶದ ಸ್ಥಿತಿ ನಮ್ಮ ರಾಜ್ಯದಲ್ಲಿ ಇಲ್ಲ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ. ಘಟನೆ ಸಂಬಂಧ ಪೊಲೀಸರು ತೆಗೆದುಕೊಂಡ ಕ್ರಮದ ಬಗ್ಗೆ ಯಾರೂ ಏನೇ ಹೇಳಿದರೂ ನಾನು ಪ್ರತಿಕ್ರಿಯೆ ನೀಡಲ್ಲ. ಪೊಲೀಸರಿಗೆ ಕಾನೂನು ಮುಖ್ಯ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಅವರನ್ನು ಯಾರಿಂದಲೂ ಕುಗ್ಗಿಸೋಕೆ ಸಾಧ್ಯವಿಲ್ಲ ಎಂದು ತಿಳಿಸಿದರು.