ಮೈಸೂರು : ರೇಷ್ಮೆ ಕೃಷಿಯ ವಿಚಾರಗಳನ್ನು ತಿಳಿದುಕೊಳ್ಳದವರು ಪ್ರಾಯೋಗಿಕವಾಗಿ ಬೆಳೆಯಲಾರರು. ಹವಾಮಾನ ವೈಪರೀತ್ಯ, ತಂತ್ರಜ್ಞಾನದ ಮಾಹಿತಿ ಕೊರತೆ ರೇಷ್ಮೆ ಕೃಷಿಯ ಹಿನ್ನಡೆಗೆ ಕಾರಣ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಆರ್.ನಿರಂಜನ ಹೇಳಿದರು.
ನಗರದ ಮಾನಸ ಗಂಗೋತ್ರಿಯ ಮೈಸೂರು ವಿಶ್ವವಿದ್ಯಾನಿಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ‘ರೇಷ್ಮೆ ಕೃಷಿ ತಾಂತ್ರಿಕತೆಗಳ ಕುರಿತು ರಾಷ್ಟ್ರೀಯ ಪ್ರಾಯೋಗಿಕ ತರಬೇತಿ ಕಾಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಸಮಯದಲ್ಲಿ ಪ್ರಾಯೋಗಿಕ ಅವಕಾಶ ದೊರೆತರೆ, ಆ ಅನುಭವ ಕೃಷಿ ಭೂಮಿಯಲ್ಲಿ ಸಹಾಯ ಮಾಡುತ್ತದೆ. ಕೃಷಿಯಲ್ಲಿ ಮಣ್ಣಿನ ಪರೀಕ್ಷೆ ಮುಂತಾದ ವೈಜ್ಞಾನಿಕತೆ ಅಳವಡಿಕೆಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೇಷ್ಮೆ ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಂಡರೆ ವರ್ಷದಲ್ಲಿ ಆರರಿಂದ ಏಳು ಬೆಳೆ ಪಡೆಯಬಹುದು. ರೇಷ್ಮೆಗೂಡಿಗೆ ನಿಖರವಾದ ಬೆಲೆ ಕೂಡ ಸಿಗಲಿದೆ. ಹಾಗಾಗಿ ರೈತರು ಸಾಂಪ್ರದಾಯಿ ಬೆಳೆಗೆ ಬದಲಾಗಿ ರೇಷ್ಮೆ ಬೆಳೆಯತ್ತ ಆಸಕ್ತಿ ವಹಿಸಬೇಕು. ಉತ್ತಮ ಗುಣಮಟ್ಟದ ಬೈವೋಲ್ಟೀನ್ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಹಲವು ರೇಷ್ಮೆ ಕೃಷಿಕರು ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಎನ್.ಕೆ.ಲೋಕನಾಥ್ ಮಾತನಾಡಿ, ರೇಷ್ಮೆ ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿದ್ದು, 2024-25ರ ಆರ್ಥಿಕ ವರ್ಷದಲ್ಲಿ 41.121 ಮೆಟ್ರಿಕ್‌ನಷ್ಟು ಉತ್ಪಾದನೆಯಾಗಿದ್ದು ಇದರಲ್ಲಿ ಹಿಪ್ಪು ನೇರಳೆ ರೇಷ್ಮೆಯು ಶೇ.75ರಷ್ಟು ಮತ್ತು ಹಿಪ್ಪು ನೇರಳೇತರ ರೇಷ್ಮೆಯು ಶೇ.25ರಷ್ಟು ಪಾಲಿರುತ್ತದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ರೇಷ್ಮೆ ಕೃಷಿ ಮತ್ತು ರೇಷ್ಮೆ ಕೈಗಾರಿಕಾ ಚಟುವಟಿಕೆಗಳಿಂದ ವಾರ್ಷಿಕವಾಗಿ ಸುಮಾರು 92ಲಕ್ಷ ಜನಕ್ಕೆ ಉದ್ಯೋಗವಕಾಶಗಳು ದೊರೆಯುತ್ತಿವೆ ಎಂದು ವಿವರಿಸಿದರಲ್ಲದೆ, ರೇಷ್ಮೆ ಕೃಷಿಯನ್ನು ಉದ್ಯಮವನ್ನಾಗಿಸಲು ಈ ವಿಚಾರ ಸಂಕಿರಣವು ಸೂರ್ತಿಯಾಗಿರುತ್ತದೆ ಎಂಬುದಾಗಿ ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಿ. ಸಣ್ಣಪ್ಪ, ಸಂಘಟನಾ ಕಾರ್ಯದರ್ಶಿ ಪ್ರೊ ಎಂ.ಎನ್.ಅನಿಲ್ ಕುಮಾರ್ ಇದ್ದರು.





