ಮೈಸೂರು: ನನ್ನೊಬ್ಬನ ಮೇಲೆ ಕಾಂಗ್ರೆಸ್‌ಗೆ ಅತಿಯಾದ ಭಯವಿದ್ದು, ಪದೇ ಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರು ಜಪಿಸುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆ ಅತಿಯಾದ ಭಯ ಇದೆ. ಹೀಗಾಗಿ ಪದೇ ಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪಿಸುತ್ತಾರೆ. ಬಿಜೆಪಿ-ಜೆಡಿಎಸ್ ಜೊತೆಯಾದ ಮೇಲಂತು ಕಾಂಗ್ರೆಸ್‌ಗೆ ನಿದ್ದೆ ಬರುತ್ತಿಲ್ಲ. ಅದಕ್ಕೋಸ್ಕರ ನನ್ನ ಮೇಲೆ ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಇನ್ನು ಮುಂದಿನದು ನಮ್ಮದೇ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಂದಿನದ್ದಲ್ಲ ಇನ್ನು ಇಪ್ಪತ್ತು ವರ್ಷವೂ ನಿಮ್ಮದೇ ಇರಲಿ. ಮೊದಲು ಹೇಳಿದ ಕೆಲಸ ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದ್ರು ಎಂಬುದು ನಮಗೆಲ್ಲಾ ಗೊತ್ತಿದೆ. ಯಾರದ್ದು ಸರ್ಕಾರ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿದೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸನ್ನು ಜನ ಹೇಗೆ ಒಪ್ಪುತ್ತಾರೆ. ಜನ ಎಲ್ಲದನ್ನು ಗಮನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರ್‌ಎಸ್‌ಎಸ್ ವಿಚಾರ ಇರಲಿ. ಮೊದಲು 40 ವರ್ಷದಿಂದ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಾ ಅದನ್ನು ಮೊದಲು ಹೇಳಿ. ಆರ್‌ಎಸ್‌ಎಸ್ ಬಂದ್ ಮಾಡುವುದಿರಲಿ. ಈಗ ಕಾಂಗ್ರೆಸ್ಸೇ ಎಲ್ಲಾ ಕಡೆ ಬಂದ್ ಆಗುತ್ತಿದೆ. ಜನರೇ ಬಹುತೇಕ ಕಡೆ ಕಾಂಗ್ರೆಸ್‌ನ್ನು ಬ್ಯಾನ್ ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಿ. ಪ್ರಿಯಾಂಕ್ ಖರ್ಗೆ ಬಾಯಿ ಚಪಲಕ್ಕೆ ಮೂಲ ವಿಚಾರಗಳನ್ನು ಮರೆ ಮಾಚಲು ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದರು.





