ಮೈಸೂರು: ಕದನ ವಿರಾಮ ಘೋಷಣೆಯಾದರೂ ಪಾಕ್ ತನ್ನ ನರಿ ಬುದ್ಧಿಯನ್ನು ಬಿಡದೇ ಭಾರತದ ಹಲವೆಡೆ ದಾಳಿ ಮಾಡಿರುವ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಮೈಸೂರಿನ ಹಾರ್ಡಿಂಜ್ ವೃತ್ತದ ಬಳಿ ಭಾರತೀಯ ಸೈನಿಕರ ಕಟೌಟ್‌ಗೆ ಈಡುಗಾಯಿ ಹೊಡೆದು ಜೈಕಾರ ಹಾಕಿದ ವಾಟಾಳ್ ನಾಗರಾಜ್ ಅವರು, ಭಾರತೀಯ ಸೈನಿಕರಿಗೆ ಶುಭ ಕೋರಿದರು.
ಈ ವೇಳೆ ಮಾತನಾಡಿದ ಅವರು, ಪದೇ ಪದೇ ಕಾಲು ಕೆರೆದುಕೊಂಡು ಬರುವ ಪಾಪಿ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರವನ್ನು ಕೊಡುತ್ತಿದ್ದಾರೆ. ಕದನ ವಿರಾಮಕ್ಕೆ ಅಮೇರಿಕಾ ಮಧ್ಯಸ್ಥಿಕೆ ವಹಿಸಿ ಶಾಂತಿ ನೆಲೆಸಲು ಪ್ರಯತ್ನ ಮಾಡಿದೆ. ಆದರೂ ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಪರಿಣಾಮ ಪಾಕಿಸ್ತಾನಕ್ಕೆ ನಮ್ಮ ಸೇನೆ ದಿಟ್ಟ ಪ್ರತ್ಯುತ್ತರ ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಭಾರತೀಯ ಸೈನಿಕರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು.