Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಅ.14, 15ಕ್ಕೆ ಮೈಸೂರಲ್ಲಿ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ

ಮೈಸೂರು : ಭಾರತರತ್ನ ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ ೭೦ ವರ್ಷಗಳಾದ ಹಿನ್ನೆಲೆಯಲ್ಲಿ ಮಾನವ ಮೈತ್ರಿ ಆಶಯದಲ್ಲಿ ಅ. ೧೪ ಮತ್ತು ೧೫ರಂದು ಎರಡು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು, ರಾಜ್ಯ ಅಂಬೇಡ್ಕರ್‌ವಾದಿ ಸಂಘಟನೆಗಳು, ವಿಶ್ವಮೈತ್ರಿ ಬುದ್ಧ ವಿಹಾರದ ಸಂಯುಕ್ತಾಶ್ರದಯ್ಲಲಿ ಸಮ್ಮೇಳನ ಆಯೋಜಿಸಲಾಗಿದೆ. ಎರಡು ದಿನಗಳ ಸಮ್ಮೇಳನಕ್ಕೆ ಮೈಸೂರು ಸೇರಿದಂತೆ ರಾಜ್ಯ,ಹೊರ ರಾಜ್ಯ,ದೇಶಗಳಿಂದ ಸುಮಾರು ೩೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ನುಡಿದರು.

ಇವತ್ತು ವಿಶ್ವವೇ ಬುದ್ಧರ ಕಡೆ ಮುಖ ಮಾಡುತ್ತಿದೆ. ಸಂಘರ್ಷದ ಹಾದಿ ಇರಬಾರದು. ಸಂವೇದನೆ ಇರಬೇಕು ಎಂದು ಬುದ್ಧರು ಹೇಳಿದ್ದಾರೆ. ಕರುಣೆ, ಮೈತ್ರಿ ವರ್ತಮಾನ ಬದುಕಿಗೆ ಅಗತ್ಯವಾಗಿದೆ. ನಮ್ಮ ನಡೆ ಬುದ್ಧರ ಕಡೆ ಎಂಬ ಆಶಯದಲ್ಲಿ ಈ ಮಹಾ ಸಮ್ಮೇಳನ ಸಂಯೋಜನೆ ಮಾಡಿದೆ. ಇದು ಚಾರಿತ್ರಿಕವಾದ ಕಾರ್ಯಕ್ರಮವೂ ಹೌದು ಎಂದು ತಿಳಿಸಿದರು.

ಭಾರತೀಯರೆಲ್ಲರೂ ಮೂಲತಃ ಬೌದ್ಧರು ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಮನುಷ್ಯ ಮನುಷ್ಯರನ್ನು ಗೌರವಿಸಬೇಕು. ಮುಖ್ಯ ನ್ಯಾಯಮೂರ್ತಿ ದಲಿತನಾಗಿರುವುದನ್ನು ಈ ದೇಶದಲ್ಲಿ ಸಹಿಸುತ್ತಿಲ್ಲ. ಯಾವ ಧರ್ಮ ಶೂ ಎಸೆಯುವುದನ್ನು ಬಯಸುತ್ತದೆ. ರಕ್ತಕ್ಕಾಗಿ ಹಪಾಹಪಿಸುತ್ತದೆ? ಹಾಡುಹಗಲಿನಲ್ಲಿ ಕೊಲೆ, ಅತ್ಯಾಚಾರಗಳು ವರದಿಯಾಗುತ್ತಿವೆ. ಈ ತುರಿತ ಕಾಲದಲ್ಲಿ ಮಾನವ ಮೈತ್ರಿ ಸ್ಥಾಪನೆ ಆಶಯದಲ್ಲಿ ಸಮ್ಮೇಳನ ನಡೆಯಲಿದೆ ಎಂದು ವಿವರಿಸಿದರು. ನಾವು ಸಂಘರ್ಷದ ಕಡೆಗೆ ಹೋಗದೆ ಬುದ್ಧನ ಕಡೆಗೆ ಸಾಗಬೇಕು. ಅಂಬೇಡ್ಕರ್ ಅವರು ೮ಲಕ್ಷ ಜನರೊಂದಿಗೆ ಬುದ್ಧ ಧಮ್ಮವನ್ನು ಅಪ್ಪಿಕೊಂಡರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಿಲ್ಲ. ನಾವು ಮೂಲ ನಿವಾಸಿಗಳಾಗಿರುವ ಕಾರಣ ಧಮ್ಮದ ಕಡೆಗೆ ಹಿಂತಿರುಗುತ್ತಿದ್ದೇವೆ ಎಂಬುದನ್ನು ಅರಿಯಬೇಕು ಎಂದರು.

ಇದನ್ನು ಓದಿ :  ಅ.14,15 ರಂದು ಮೈಸೂರಲ್ಲಿ ಬೌದ್ಧ ಮಹಾ ಸಮ್ಮೇಳನ

ಮಾಜಿ ಮಹಾಪೌರ ಪುರುಷೋತ್ತಮ್ ಎರಡು ದಿನಗಳ ಸಮ್ಮೇಳನ ಕಾರ್ಯಕ್ರಮದ ಕುರಿತಂತೆ ಮಾತನಾಡಿ, ಬೌದ್ಧ ಸಮ್ಮೇಳನವೂ ಅಂಬೇಡ್ಕರ್ ಅವರ ಕಂಡ ಕನಸ್ಸನ್ನು ಈಡೇರಿಸಲು ಮತ್ತು ಎಲ್ಲ ಸಮಾಜದ, ಧರ್ಮದ, ವರ್ಗಗಳ ಜನರನ್ನು ಒಳಗೊಂಡ ಕಾರ್ಯಕ್ರಮವಾಗಿದೆ. ಯಾರ ವಿರುದ್ಧ ಅಥವಾ ಯಾರನ್ನೂ ಟೀಕಿಸಲು ಸಮ್ಮೇಳನ ಮಾಡುತ್ತಿಲ್ಲ. ಬೌದ್ಧ ಧಮ್ಮ ಪುನರುತ್ಥಾನಕ್ಕಾಗಿ ಈ ಸಮ್ಮೇಳನ ಆಯೋಜಿಸಿದ್ದೇವೆ. ಭಾರತ ಮಾತ್ರವಲ್ಲ ಇಡೀ ವಿಶ್ವವೇ ಬುದ್ಧನ ಕಡೆ ಮುಖ ಮಾಡುತ್ತಿದೆ. ಜೀವರಾಶಿಯ ಮೈತ್ರಿ ಕಾರ್ಯಕ್ರಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ನಾಲ್ಕು ವೇದಿಕೆಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಖ್ಯಾತ ಸಾಹಿತಿಗಳು, ಹೋರಾಟಗಾರರಾದ ಕಾಂಚಾ ಈಳಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ರಹಮತ್ ತರೀಕೆರೆ, ಬಂಜಗೆರೆ ಜಯಪ್ರಕಾಶ್, ಪ್ರೊ.ಅಪ್ಪಗೆರೆ ಸೋಮಶೇಖರ್, ಕೆ.ದೀಪಕ್, ನಾಗಸಿದ್ಧಾರ್ಥ ಹೊಲೆಯಾರ್, ಎಚ್.ಎಸ್. ಅನುಪಮಾ, ಅಶೋಕ್, ಪ್ರೊ.ಸೋಸಲೆ ಚಿನ್ನಸ್ವಾಮಿ, ಮಲ್ಲಿಕಾರ್ಜುನ ಕನಕಪುರ, ಸೋಸಲೆ ಗಂಗಾಧರ್, ಅಮೃತ ಅತ್ರಾಡಿ, ವಡ್ಡಗೆರೆ ನಾಗರಾಜಯ್ಯ, ಡಾ.ವಿಠ್ಠಲ್ ವಗ್ಗನ್, ಪ್ರೊ.ಸೋಮಶೇಖರ್, ಡಾ.ಎಚ್.ಟಿ. ಪೋತೆ, ಪ್ರಕಾಶ್ ರಾಜ್, ತಲಕಾಡು ರಂಗೇಗೌಡ, ಹರ್ಷಕುಮಾರ್ ಕುಗ್ವೆ, ಡಾ.ಕೃಷ್ಣಮೂರ್ತಿ ಚಮರಂ, ಡಾ.ಶಿವಕುಮಾರ, ಜಯದೇವಿತಾಯಿ ಲಿಗಾಡೆ, ಚೇತನ್ ಅಹಿಂಸಾ, ಪ್ರೊ.ಹರಿರಾಮ್, ಡಾ.ಜಿ.ಶ್ರೀನಿವಾಸ್, ಡಾ.ಹ.ರಾ. ಮಹೇಶ್, ಡಾ.ನಟರಾಜ್ ಬೂದಾಳ್, ಧರಣಿದೇವಿ ಮಾಲಗತ್ತಿ ಮುಂತಾದವರು ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.

ಅ.೧೫ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಕೆ.ವೆಂಕಟೇಶ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಮೈಸೂರು ಚಾಮರಾಜನಗರ ಜಿಲ್ಲೆಗಳ ಹಾಲಿ ಮಾಜಿ ಜನಪ್ರತಿನಿಧಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೌದ್ಧ ಬಿಕ್ಕು ಕಲ್ಯಾಣಸಿರಿ ಬಂತೇಜಿ, ಮಾತೇ ಗೌತಮಿ, ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ, ಮುಖಂಡರಾದ ಸಿದ್ದರಾಜು, ಮಹೇಶ್, ಬಿಲ್ಲಯ್ಯ ಬಸವರಾಜು, ಸೋಮಯ್ಯ ಮಲೆಯೂರು, ಸೋಸಲೆ ಸಿದ್ದರಾಜು ಮುಂತಾದವರು ಇದ್ದರು.

Tags:
error: Content is protected !!