ಮೈಸೂರು: ಎಸ್‌ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾಕೆ ಈ ರೀತಿ ನಿಲುವು ತೆಗೆದುಕೊಳ್ಳುತ್ತಿದೆ ನಮಗೆ ಗೊತ್ತಿಲ್ಲ. ಸಂವಿಧಾನದ ಆಶಯದಂತೆ ನಾವೆಲ್ಲಾ ನಡೆಯಬೇಕು ಎಂದು ಹೇಳಿದರು.
ಇದನ್ನು ಓದಿ : ಮೈಸೂರು ದಸರಾ | ಅರಮನೆ ಸುತ್ತ ಸ್ಥಳಪರಿಶೀಲಿಸಿದ ಆಯುಕ್ತರು
ಇನ್ನು ಕ್ರಿಶ್ಚಿಯನ್ ಕಾಲಂನಲ್ಲಿ ಹಿಂದೂ ಉಪಜಾತಿಗಳ ಹೆಸರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಸರಿಯಲ್ಲ. ಈ ಹಿಂದೆ ಈ ರೀತಿ ಜಾತಿ ಹೆಸರು ಇಲ್ಲ. ಯಾರನ್ನೋ ಮೆಚ್ಚಿಸುವ ಸಲುವಾತಿ ಹೊಸ ಜಾತಿ ಸೃಷ್ಟಿ ಆಗುತ್ತಿದೆ. ಈಗಾಗಲೇ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಯಾವುದೇ ಕಾರಣಕ್ಕೂ ಹೊಸ ಜಾತಿಗಳ ಸೇರ್ಪಡೆಗೆ ಒಪ್ಪುವುದಿಲ್ಲ ಎಂದು ಹೇಳಿದರು.
ಇನ್ನು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಡಾದಲ್ಲಿ ಅಕ್ರಮ ಆಗಿದೆ. ಹೀಗಾಗಿ ತನಿಖೆ ನಡೆಯುತ್ತಿದೆ. ನಾವು ಹಿಂದೇನೆ ಸಮಗ್ರ ತನಿಖೆ ಆಗ್ಬೇಕು ಎಂದು ಹೇಳಿದ್ವಿ. ಈಗ ದಿನೇಶ್ ಕುಮಾರ್ ಬಂಧನ ಮಾಡಿದ್ದಾರೆ. ಮುಡಾ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅವರ ಮೇಲೂ ತನಿಖೆ ಆಗಲಿ ಎಂದು ಆಗ್ರಹಿಸಿದರು.
ಇನ್ನು ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸಿದ್ದೇವೆ. ತನಿಖೆಯಿಂದ ಈಗಾಗಲೇ ಸತ್ಯ ಏನು ಎಂದು ಎಲ್ಲರಿಗೂ ಗೊತ್ತಾಗಿದೆ. ಇನ್ನು ಏನು ಬೇಕಾದ್ರೂ ತನಿಖೆ ಮಾಡಲಿ. ಧಾರ್ಮಿಕ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಎಂದು ಜನ ಹೇಳ್ತಿದ್ದಾರೆ. ತನಿಖೆಗೆ ನಮ್ಮ ವಿರೋಧ ಇಲ್ಲ. ಆದ್ರೆ ತನಿಖೆ ವರದಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.





