ಮೈಸೂರು: ಇನ್ನು ಮೂರ್ನಾಲ್ಕು ದಿನಗಳಲ್ಲಿ ರಸಗೊಬ್ಬರದ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರಗಳ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ ರೈತರ ಸಮಸ್ಯೆ ಉಲ್ಬಣ ಆಗುತ್ತಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ವಿತರಣೆ ಮಾಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ರಸಗೊಬ್ಬರ ಯೂರಿಯಾ ಕೊರತೆ ಇದೆ. ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ಆರೋಪ ಮಾಡುತ್ತಿವೆ. ಕಾಳ ಸಂತೆಯಲ್ಲಿ ಮಾತ್ರ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ತಕ್ಷಣ ರಸಗೊಬ್ಬರ ಕೊರತೆಯನ್ನು ಸರಿಮಾಡಬೇಕು. ಇವು ನರಸತ್ತ ಸರ್ಕಾರಗಳು. ಮೂರ್ನಾಲ್ಕು ದಿನಗಳ ಕಾಲ ಕಾದು ನೋಡುತ್ತೇವೆ. ಒಂದು ಸರ್ಕಾರ ಈ ಸಮಸ್ಯೆ ಬಗೆಹರಿಸದೆ ಇದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಇನ್ನು ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಲೇ ಇದೆ. ಅರಣ್ಯ ಸಚಿವರು ಕೇವಲ ದಸರಾ ಆನೆ ಸ್ವಾಗತ ಮಾಡಿ ಹೋಗೋದಲ್ಲ. ಆನೆಗಳಿಂದ ಆಗುವ ತೊಂದರೆ ಬಗ್ಗೆ ಗಮನಹರಿಸಬೇಕು. ಮೈಸೂರು ಭಾಗದಲ್ಲಿ ಒಂದು ದಿನ ಸಚಿವರು ವಾಸ್ತವ್ಯ ಹೂಡಿ, ಇಲ್ಲಿನ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದರು.





