ಮೈಸೂರು: ಈ ಬಾರಿ ಹೊಸ ಮುಖ್ಯಮಂತ್ರಿಯಿಂದ ದಸರಾ ಉದ್ಘಾಟನೆಯಾಗಲಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ನಾನೇ ಈ ಬಾರಿಯ ದಸರಾವನ್ನೂ ಉದ್ಘಾಟನೆ ಮಾಡುತ್ತೇನೆ. ಇದೇ ಸತ್ಯ. ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.
ಇನ್ನು ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ನಾನು ಡಿಸಿಎಂ ಡಿಕೆಶಿ ಇಬ್ಬರೂ ಚೆನ್ನಾಗಿಯೇ ಇದ್ದೇವೆ. ಮುಂದೆಯೇ ಚೆನ್ನಾಗಿಯೇ ಇರುತ್ತೇವೆ ಎಂದು ಹೇಳುತ್ತಾ ಡಿಕೆಶಿ ಅವರ ಕೈ ಎತ್ತಿದರು. ಇಬ್ಬರೂ ಸಂತೋಷದಿಂದಲೇ ಮುಗುಳ್ನಗುತ್ತಾ ಒಗ್ಗಟ್ಟು ಪ್ರದರ್ಶಿಸಿದರು.
ಇನ್ನು ಸಿಎಂ ಬದಲಾವಣೆ ಬಗ್ಗೆ ಶ್ರೀರಾಮುಲು ಹೇಳಿಕೆಯಲ್ಲಿ ಹುರುಳಿಲ್ಲ. ನಮ್ಮ ಬಗ್ಗೆ ಮಾತನಾಡಲು ಶ್ರೀರಾಮುಲುಗೆ ನೈತಿಕತೆಯಿಲ್ಲ. ಶ್ರೀರಾಮುಲು ಎಷ್ಟು ಸಲ ಸೋತಿಲ್ಲ? ಆಗ ಅವರಿಗೆ ಅವರ ಭವಿಷ್ಯ ಗೊತ್ತಿರಲಿಲ್ಲವೇ?ನಮ್ಮ ಸರ್ಕಾರ ಬಂಡೆ ರೀತಿ ೫ ವರ್ಷ ಇರುತ್ತದೆ. ನಾನು, ಡಿಕೆಶಿ ಚೆನ್ನಾಗಿಯೇ ಇದ್ದೇವೆ. ಒಗ್ಗಟ್ಟಿನಿಂದಲೇ ಇದ್ದೇವೆ. ನಾವು ಯಾರ ಮಾತನ್ನೂ ಕೇಳಲ್ಲ ಎಂದು ಹೇಳಿದರು





