ಮೈಸೂರು: ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದ್ದು, ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಸುಳಿವು ನೀಡಿದರು.
ಈ ಕುರಿತು ಮೈಸೂರಿನಲ್ಲಿ ಇಂದು( ನ.22) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಸಚಿವ ಸ್ಥಾನ ನಿಭಾಯಿಸುವ ಬುದ್ಧಿಶಕ್ತಿಯಿದೆ. ರಾಜ್ಯಸರ್ಕಾರದ ಸಚಿವ ಸಂಪುಟ ಪುನರ್ ರಚನೆ ವಿಚಾರ ಈಗಾಗಲೇ ಮುನ್ನೆಲೆಗೆ ಬಂದಿದ್ದು, ಸಂಪುಟ ಪುನರ್ ರಚನೆ ಆದರೂ ಆಗಬಹುದು ಎಂದರು.
ಇದೇ ವೇಳೆ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ವಿಚಾರ ಕುರಿತು ಮಾತನಾಡಿದ ಅವರು, ನನಗೆ ಬಿಜೆಪಿಯಿಂದ ಯಾವುದೇ ಆಫರ್ ಬಂದಿಲ್ಲ. ಆಫರ್ ಬಂದರು ನಾನು ಹೋಗುವುದಿಲ್ಲ, ಏಕೆಂದರೆ ನಾನು ಬಿಜೆಪಿ ಪಕ್ಷದಲ್ಲಿದ್ದಾಗ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ಖಂಡಿಸಿದ್ದೇನೆ. ಅಲ್ಲದೇ ನನ್ನ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ ಎಂದು ಭಾವಿಸಿ ಬಿಜೆಪಿಯನ್ನೇ ಬಿಟ್ಟು ಬಂದಿದ್ದೇನೆ. ಹೀಗಾಗಿ ಯಾವುದೇ ಆಫರ್ ಬಂದರು ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು.