ಮೈಸೂರು: ನನಗೂ ಸಚಿವನಾಗುವ ಆಸೆಯಿದ್ದು, ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಮಂತ್ರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸಚಿವ ಸಂಪುಟ ರಚನೆ ವೇಳೆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅಂತಿಮ ಕ್ಷಣದಲ್ಲಿ ನನ್ನ ಹೆಸರನ್ನು ಬದಲಾಯಿಸಲಾಯಿತು. ಪಕ್ಷದ ನಾಯಕರೆಲ್ಲಾ ಮನವೊಲಿಸಿ ಉಪಸಭಾಪತಿ ಸ್ಥಾನ ನೀಡಿದರು ಎಂದರು.
ಇನ್ನು ನಮ್ಮ ಸಮುದಾಯ ನಿರಂತರವಾಗಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಹೀಗಾಗಿ ಈ ಬಾರಿ ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲರಿಗೂ ಆಸೆಯಿರುವಂತೆ ನನಗೂ ಮಂತ್ರಿಯಾಗಬೇಕೆಂಬ ಆಸೆಯಿದೆ ಎಂದರು.
ಈ ಮೂಲಕ ರಾಜ್ಯ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ ಎನ್ನಲಾಗಿದ್ದು, ಕೆಲ ಶಾಸಕರು ಸದ್ದಿಲ್ಲದೇ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.




