ಮೈಸೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಹೊರ ಬರಲೆಂದೇ ನಾವು ಎಸ್ಐಟಿ ರಚನೆ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ. ಸತ್ಯ ಹೊರ ಬರಬೇಕು ಎಂದೇ ನಾವು ಎಸ್ಐಟಿ ರಚನೆ ಮಾಡಿದ್ದೇವೆ. ಈ ಮಧ್ಯೆ ಅನೇಕ ಹೇಳಿಕೆಗಳನ್ನು ಗಮನಿಸಿದ್ದೇನೆ. ಹೇಳಿಕೆಗಳಿಂದ ಸತ್ಯ ಹೊರ ಬರಲ್ಲ. ಹೇಳಿಕೆ ನಿಲ್ಲಿಸಿ ತನಿಖೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕು. ಅವಾಗ ಸತ್ಯ ಹೊರಬರುತ್ತದೆ. ಇದರಲ್ಲಿ ರಾಜಕೀಯ ಮಾಡಬೇಡಿ. ಸತ್ಯ ಹೊರ ಬರಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಈಗಾಗಲೇ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡಿದ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ. ಎನ್ಐಎ ತನಿಖೆ ಅವಶ್ಯಕತೆ ಬಗ್ಗೆ ಸದ್ಯ ತನಿಖೆ ಮಾಡುವವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.
ಇನ್ನು ಜೆಡಿಎಸ್‌ನಿಂದ ಧರ್ಮಸ್ಥಳ ರ್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜೆಡಿಎಸ್‌ನವರು ಕೂಡ ಮಂಜುನಾಥನ ದರ್ಶನ ಪಡೆಯಲಿ. ನಾವು ಯಾರನ್ನು ತಡೆಯಲ್ಲ. ಇದರಲ್ಲಿ ರಾಜಕಾರಣ ಬೇಡ ಎಂದು ಹೇಳಿದ್ದೇವೆ. ಮಂಜುನಾಥನ ದರ್ಶನ ಯಾರು ಬೇಕಾದ್ರೂ ಪಡೆಯಬಹುದು. ಈ ಪ್ರಕರಣದಲ್ಲಿ ತನಿಖೆಗೆ ಕಾಲ ನಿಗದಿ ಮಾಡೋದಕ್ಕೆ ಆಗಲ್ಲ. ಆದ್ರೆ ಅದಷ್ಟು ಬೇಗ ತನಿಖೆ ಮಾಡಿ ಎಂದು ಹೇಳಿದ್ದೇವೆ ಎಂದರು.



