ಮೈಸೂರು : ಮುಂಜಾನೆಯ ಚುಮುಚುಮು ಚಳಿಗೆ, ಸೂರ್ಯ ಇನ್ನೂ ಮಂಜಿನ ನಡುವೆ ಕಣ್ಣು ಬಿಡುವ ಮುನ್ನವೇ ಅರಮನೆಯ ಕೋಟೆ ಆಂಜನೇಯ ದೇಗುಲದ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ನಗರದ ಪಾರಂಪರಿಕ ಶ್ರೀಮಂತಿಕೆ ಸಾರುವ ‘ಫ್ಲ್ಯಾಶ್ ಮೊಬ್’ ಅನಾವರಣಗೊಂಡಿತು. ಸುಮಾರು ಅರ್ಧಗಂಟೆಗಳ ಕಾಲ ನಗರದ ಪೂರ್ಣಚೇತನ ಶಾಲೆಯ ೧೭೦ ಮಕ್ಕಳು ೧೪ ಚಾರಿತ್ರಿಕ, ಜಾನಪದ, ದೇಶ ಪ್ರೇಮದ ಗೀತೆಗಳ ಮೂಲಕ ಹೊಸ ಲೋಕಕ್ಕೆ ನೋಡುಗರನ್ನು ಕೊಂಡೊಯ್ದರು.
ಫ್ಲ್ಯಾಶ್ ಮೊಬ್ ಬಳಿಕ, ನಗರದ ಇತಿಹಾಸ, ಪರಂಪರೆ ಆಧಾರಿತ ಹೆರಿಟೇಜ್ ಟ್ರೆಷರ್ ಹಂಟ್ ಅನ್ನು ಖ್ಯಾತ ಮೂಳೆ ತಜ್ಞ ಡಾ.ಟಿ.ಎನ್.ಬಾಲಕೃಷ್ಣೇ ಗೌಡ ಉದ್ಘಾಟಿಸಿ, ಈ ಹೆರಿಟೇಜ್ ಟ್ರೆಷರ್ ಹಂಟ್ ನ ವಿಜೇತರಿಗೆ ಬಿ.ಕೆ.ಜಿ. ಆವಾಂತ ಆಸ್ಪತ್ರೆಯಲ್ಲಿ ಐದು ಸಾವಿರ ರೂಪಾಯಿಗಳ ಉಚಿತ ವೈದ್ಯಕೀಯ ಪರೀಕ್ಷೆಗಳನ್ನು ಘೋಷಿಸಿದರು.
ಇದನ್ನು ಓದಿ: ರಾಜ್ಯದಲ್ಲಿ ಇಬ್ಬರು ತಲೆಕೆಟ್ಟ ಮಂತ್ರಿಗಳಿದ್ದಾರೆ: ಶಾಸಕ ಜನಾರ್ಧನ ರೆಡ್ಡಿ
ಖ್ಯಾತ ಶ್ವಾಸಕೋಶ ತಜ್ಞ ಡಾ.ಲಕ್ಷ್ಮೀನರಸಿಂಹನ್ ಮಾತನಾಡಿದರು.
ಭಾಗವಹಿಸಿದ ಪ್ರತೀ ತಂಡಕ್ಕೂ ಕಾರ್ಯಕ್ರಮದ ಆರಂಭದಲ್ಲೇ ೧೦ ಸುಳಿವುಗಳನ್ನು ಒಳಗೊಂಡ ವಿಶೇಷ ಟ್ರೆಷರ್ ಕಿಟ್ ನೀಡಲಾಗಿತ್ತು. ಚೆಲುವಾಂಬ ಮ್ಯಾನ್ಷನ್, ರೈಲ್ವೆ ನಿಲ್ದಾಣ, ಓಆರ್‌ಐ, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿ ಹಳೆ ಕಚೇರಿ, ಪುರಭವನ ಹೀಗೆ ನಗರದ ಪ್ರಮುಖ ಪಾರಂಪರಿಕ ಸ್ಥಳಗಳನ್ನು ಪತ್ತೆ ಹೆಚ್ಚುವ ಸವಾಲು ಒಡ್ಡಲಾಗಿತ್ತು.
೧ ಗಂಟೆ ೧೮ ನಿಮಿಷದಲ್ಲಿ ಈ ಸವಾಲು ಪೂರ್ತಿ ಮಾಡಿದ ಪೂರ್ಣ ಚೇತನ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹೃದ್ಯ ಹಾಗೂ ಆಕೆಯ ತಂದೆ ಭುವನೇಶ್ವರ್ ಪ್ರಥಮ ಸ್ಥಾನ ಪಡೆದರು. ಆಟೋ ಮೂಲಕ ಅವರು ಈ ಸವಾಲು ಪೂರ್ತಿಗೊಳಿಸಿದರು. ಅದೇ ಶಾಲೆಯ ಏಳನೇ ತರಗತಿಯ ಇನ್ನೋರ್ವ ವಿದ್ಯಾರ್ಥಿನಿ ಆರೋಹಿ ಸಿಂಗ್ ಹಾಗೂ ಆಕೆಯ ತಂದೆ ಸಂತೋಷ್ ಕುಮಾರ್ ಸಿಂಗ್ ದ್ವಿತೀಯ ಪ್ರಶಸ್ತಿ ಪಡೆದರು. ಕೆ.ಆರ್. ನಗರದ ವಾಸವಿ ಸಾಂಸ್ಕೃತಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಋತ್ವಿ ಹಾಗು ತೇಜೇಶ್ ಗೌಡ ತೃತೀಯ ಸ್ಥಾನ ಪಡೆದರು. ಕ್ರಮವಾಗಿ ೧೦,೦೦೦,೭,೫೦೦ ಮತ್ತು ೫,೦೦೦ ರೂ. ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು. ಶಾಲೆಯ ಸಿಇಒ ದರ್ಶನ್ ರಾಜ್, ಮುಖ್ಯಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಕಾರ್ಯದರ್ಶಿ ಡಾ.ರಜಿನಿ, ಟ್ರಸ್ಟಿ ಪ್ರವೀಣ್ ಹಾಜರಿದ್ದರು.





