ಮೈಸೂರು: ತನಿಖಾ ಸಂಸ್ಥೆಗಳು ದಾಳಿ ನಡೆಸಲು ಸಂವಿಧಾನದಲ್ಲಿ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಸಂಸದರು ಹಾಗೂ ಶಾಸಕರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ ಅವರು, ತನಿಖಾ ಸಂಸ್ಥೆಗಳು ದಾಳಿ ನಡೆಸಲು ಸಂವಿಧಾನದಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಇಡಿಗೆ ದೂರು ಹೋಗಿರುತ್ತದೆ. ಈ ಹಿನ್ನೆಲೆಯಲ್ಲಿ ಇಡಿ ದಾಳಿಯಾಗಿರುತ್ತೆ. ಆದರೆ ಇಡಿ ದಾಳಿಯಲ್ಲಿ ರಾಜಕೀಯ ಉದ್ದೇಶವಿರಬಾರದು ಎಂದರು.
ಇನ್ನು ನವೆಂಬರ್‌ನಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಎಂ ಖುರ್ಚಿ ಗಟ್ಟಿಯಾಗಿದ್ದು, ಅದರ ಮೇಲೆ ಕುಳಿತಿರುವವರು ಕೂಡ ಗಟ್ಟಿಯಾಗಿದ್ದಾರೆ. ಆದ್ದರಿಂದ ಸಿಎಂ ಬದಲಾವಣೆ ಕೇವಲ ಊಹಾಪೋಹ ಎಂದು ಸ್ಪಷ್ಟನೆ ನೀಡಿದರು.
ಇನ್ನು ಬೆಂಗಳೂರು ಕಾಲ್ತುಳಿತ ದುರಂತ ಪ್ರಕರಣ ಖಂಡಿಸಿ ನಾಳೆ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷಗಳು ಇರೋದೇ ವಿರೋಧ ಮಾಡೋಕೆ. ಬೆಂಗಳೂರು ಘಟನೆ ಒಂದು ಹೃದಯವಿದ್ರಾವಕ ಘಟನೆ. ನಿರೀಕ್ಷೆಗಿಂತ ಹೆಚ್ಚಿನ ಜನ ಬಂದು ದುರಂತ ಆಗಿದೆ. ಇಂತಹ ಘಟನೆಗಳು ಬೇರೆ ಕಡೆ ನಡೆದಾಗ ಯಾರು ರಾಜೀನಾಮೆ ಕೊಟ್ಟಿದ್ರು? ಎಂದು ಪ್ರಶ್ನಿಸಿದ ಅವರು, ನೈತಿಕ ಹೊಣೆ ಅನ್ನೋದು ಮಹತ್ವದ್ದು. ತನಿಖೆ ನಡೆಯುತ್ತಿದ್ದು, ಯಾರದು ತಪ್ಪಿದೆ ಎಂದು ತನಿಖೆ ಬಳಿಕ ತಿಳಿಯಲಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಪುಟ ಪುನರ್‌ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಹೈಕಮಾಂಡ್ ಸಂಪುಟ ಪುನರ್‌ರಚನೆ ಬಗ್ಗೆ ನನ್ನನ್ನು ಸಲಹೆ ಕೊಡಿ ಎಂದು ಕೇಳಿದ್ರೆ ಕೊಡ್ತೀನಿ ಎಂದರು.