Mysore
31
few clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಪಂಚ ಗ್ಯಾರಂಟಿಯಿಂದ ಅಭಿವೃದ್ಧಿ ಆಗಿದೆಯೇ?: ತಜ್ಞರಿಂದ ಸಮೀಕ್ಷೆಗೆ ವಿಶ್ವನಾಥ್‌ ಒತ್ತಾಯ

ಮೈಸೂರು: ಪಂಚ ಗ್ಯಾರಂಟಿಗಳನ್ನು ನೀಡಿದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಏನೇನು ಅಭಿವೃದ್ಧಿಯಾಗಿದೆ ಎಂಬುದನ್ನು ಸರ್ಕಾರ ಹೇಳಲಿ ಎಂದು ಒತ್ತಾಯಿಸಿದರು.

ನಿರ್ದಿಷ್ಟ ಮಾನದಂಡವನ್ನೇ ಇಟ್ಟುಕೊಳ್ಳದೇ ಎಲ್ಲರಿಗೂ ಗ್ಯಾರಂಟಿಗಳನ್ನು ನೀಡಿರುವುದರಿಂದಾಗಿ ಆರ್ಥಿಕ ಶಿಸ್ತೇ ಇಲ್ಲದಂತಾಗಿದೆ. ಜನರ ತೆರಿಗೆ ಹಣವನ್ನೆಲ್ಲಾ ಉಚಿತ ಕೊಡುಗೆಗಳಿಗೆ ಬಳಸುತ್ತಿರುವುದರಿಂದಾಗಿ ಅಭಿವೃದ್ಧಿಯೇ ಇಲ್ಲದಂತಾಗಿದೆ. ಸಮರ್ಪಕ ಆಡಳಿತವೇ ಇಲ್ಲದೇ ರಾಜ್ಯ ಹಾಳಾಗಿದೆ. ಈ ಅನಾಹುತಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ದೂರಿದರು.

ಉಚಿತ ಕೊಡುಗೆಗಳನ್ನು ಸರ್ಕಾರದ ಹಣದಲ್ಲಿ ಕೊಡುತ್ತಿರುವುದು ಸರಿಯಲ್ಲ. ಅದರ ಬದಲಿಗೆ ಜನರನ್ನು ಸಬಲೀಕರಣ‌ ಮಾಡಿ ಎಂದು ಸುಪ್ರೀಂಕೋರ್ಟ್‌ ಈಚೆಗೆ ಹೇಳಿದೆ. ವೃದ್ಧಾಪ್ಯ ವೇತನ, ಅಂಗವಿಕಲರ ವೇತನಕ್ಕೆ ಮಾನದಂಡವಿದೆ. ಆದರೆ, ಗ್ಯಾರಂಟಿಗೆ ಏನಿದೆ? ಸಿದ್ದರಾಮಯ್ಯ ಕೊಟ್ಟರು ಎಂದು ಪ್ರಚಾರ ಪಡೆಯುವ ಹುಚ್ಚೇ? ಎಂದು ಕೇಳಿದರು.

‘ರಾಜ್ಯಕ್ಕೆ ಈಗ ₹ 7.50 ಲಕ್ಷ ಕೋಟಿ ಸಾಲ ಇದೆ. ಅದರಲ್ಲಿ ₹ 5 ಲಕ್ಷ ಕೋಟಿ ಸಾಲ ಮಾಡಿರುವವರು ಸಿದ್ದರಾಮಯ್ಯ. ಅವರಿಗಿಂತಲೂ ಉತ್ತಮ ಹಣಕಾಸು ಸಚಿವರು ನಮ್ಮಲ್ಲಿ ಆಗಿ ಹೋಗಿದ್ದಾರೆ. ಅವರನ್ನೆಲ್ಲ ಇವರು ಯಾವ ರೀತಿಯಲ್ಲಿ ಮೀರಿಸಿದ್ದಾರೆ? ಸಾಲ ಮಾಡಿ ಉಚಿತವಾಗಿ ‌ಕೊಡುವುದು ಎಷ್ಟು ಸರಿ? ಇದೇನಾ ಸಿದ್ದರಾಮಯ್ಯನವರ ಆರ್ಥಿಕ ತಜ್ಞತೆ?’ ಎಂದು ವಾಗ್ದಾಳಿ ನಡೆಸಿದರು. ‘₹ 7 ಲಕ್ಷ ಕೋಟಿ ಸಾಲ ಇಟ್ಟುಕೊಂಡು ₹ 4 ಲಕ್ಷ ಕೋಟಿ ಬಜೆಟ್ ಕೊಡುವುದು ಯಾವ ಸೀಮೆಯ ಬಜೆಟ್’ ಎಂದು ಪ್ರಶ್ನಿಸಿದರು.

‘ಜನರಿಗೆ ಮದ್ಯ ಕುಡಿಸಿ ಆ ಪಾಪದ ಹಣ 45 ಸಾವಿರ ಕೋಟಿಯಲ್ಲಿ ಉಚಿತ ಕೊಡುಗೆ ‌ಕೊಡುತ್ತಿದ್ದೀರಿ. ಪತಿಗೆ ಹೆಂಡ ಕುಡಿಸುವುದು, ಅದರಲ್ಲಿ ಬರುವ ಹಣವನ್ನೇ ಪತ್ನಿಗೆ ಕೊಡುವುದು ನಾಚಿಕೆಗೇಡಲ್ಲವೇ?’ ಎಂದು ಕೇಳಿದರು. ‘ಇದರ ಬದಲಿಗೆ ಶಿಕ್ಷಣ ಹಾಗೂ ಆರೋಗ್ಯವನ್ನು ಉಚಿತವಾಗಿ ಕೊಡಿ’ ಎಂದು ಒತ್ತಾಯಿಸಿದರು.

‘ಸಿದ್ದರಾಮಯ್ಯನವರೇ, ರಾಜ್ಯದ ಚರಿತ್ರೆ ಓದಿಕೊಳ್ಳಿ. ನಾನೇ ನಾನೇ ಎಂಬ ದುರಹಂಕಾರ ಬಿಡಿ. ಕಾಂಗ್ರೆಸ್ ಸರ್ಕಾರ ಹಿಂದೆಂದೂ ಈ ರೀತಿ ಮಾಡಿರಲಿಲ್ಲ. ಜನರ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಕೊಡುತ್ತಿತ್ತು. ನಿಮ್ಮನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದಕ್ಕೆ ಪಶ್ಚಾತ್ತಾಪ ಆಗುತ್ತಿದೆ. ಹೀಗಾಗಿ, ಗಾಂಧೀಜಿ ಪ್ರತಿಮೆಯ ಬಳಿ ಪಶ್ಚಾತ್ತಾಪ ಸಭೆ ಮಾಡೋಣ ಎಂದುಕೊಂಡಿದ್ದೇನೆ’ ಎಂದು ತಿಳಿಸಿದರು.

‘ಮಾತು ತಪ್ಪಿದ ಮಗ ನೀವು. ಶಿವಕುಮಾರ್ ಅವರಿಗೆ ಹೊಡೆತ ಕೊಟ್ಟಿದ್ದೀರಿ. ಈ ಸರ್ಕಾರ ಬರಲು ಶಿವಕುಮಾರ್ ಅವರ ಕೊಡುಗೆ ಏನೂ ಇಲ್ಲವೇ? ಅವರಿಗೆ ಅಧಿಕಾರ ‌ಕೊಡಬೇಕಲ್ಲವೇ?’ ಎಂದು ಕೇಳಿದರು.

‘ನಾನೇ ಮಹಾಮೇಧಾವಿ, ಮಹಾ ಆರ್ಥಿಕ ತಜ್ಞ ಹಾಗೂ ಮಹಾಬುದ್ಧಿವಂತ ಎಂಬ ಅಹಂ ಬಿಟ್ಟು, ಅರ್ಹರಿಗೆ ಮಾತ್ರವೇ ಗ್ಯಾರಂಟಿ ಯೋಜನೆಗಳನ್ನು ಕೊಡಿ’ ಎಂದರು.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ಖಂಡನೀಯ. ಅವರು ಈ ನೆಲದ ಕಾನೂನಿನ ಮೂಲಕ ಹೋರಾಟ ಮಾಡುತ್ತಿದ್ದಾರೆ.‌ ರಾಜ್ಯದಲ್ಲೇನು ತುರ್ತು ಪರಿಸ್ಥಿತಿ ಇದೆಯೇ? ಸರ್ಕಾರದ ತಪ್ಪು ಹುಡುಕಿದವರನ್ನು ಜೈಲಿಗೆ ಹಾಕುತ್ತೀರಾ?’ ಎಂದು ಕೇಳಿದರು.

‘ಮನರೇಗಾ ಮುಗಿದ ಅಧ್ಯಾಯ. ಕೇಂದ್ರ ಸರ್ಕಾರ ಈಗಾಗಲೇ ವಿಬಿ ಜಿರಾಮ್ ಜಿ ಕಾಯ್ದೆಯನ್ನು ಮಾಡಿದೆ. ಅಲ್ಲಿಗೆ ಮುಗಿಯಿತು. ಬದಲಾವಣೆಗೆ ಒಗ್ಗಿಕೊಂಡು ಹೋಗಲೇಬೇಕು’ ಎಂದರು.

 

 

Tags:
error: Content is protected !!