ಮೈಸೂರು: ಇಂದು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲಿ ಸಹಸ್ರಾರು ಯೋಗಪಟುಗಳಿಂದ ಯೋಗಾಭ್ಯಾಸ ಜರುಗಿತು.
ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದಡಿ ಇಂದು ನಡೆದ ಯೋಗ ದಿನಾಚರಣೆಯಲ್ಲಿ ಸಹಸ್ರಾರು ನುರಿತ ಯೋಗಾಪಟುಗಳು ಯೋಗ ಮಾಡಿ ಗಮನ ಸೆಳೆದರು.
ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಸಂಸದ ಯದುವೀರ್ ಒಡೆಯರ್, ಶಾಸಕ ಶ್ರೀವತ್ಸ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ. ಎಸ್ಪಿ ವಿಷ್ಣುವರ್ಧನ್, ಕಮಿಷನರ್ ಸೀಮಾ ಲಾಟ್ಕರ್, ಜಿ.ಪಂ ಸಿಇಓ ಯುಕೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ನಾನು ಕೂಡ ಚಿಕ್ಕಂದಿನಿಂದಲೂ ಯೋಗ ಮಾಡ್ತಿದ್ದೀನಿ. ಯೋಗ ಮಾಡೋದ್ರಿಂದ ಮಾನಸಿಕ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಎಲ್ಲರೂ ಕೂಡ ಯೋಗ ಮಾಡ್ಬೇಕು ಎಂದು ಕರೆ ನೀಡಿದರು.





