ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ 4ನೇ ಶುಕ್ರವಾರವೂ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ಮುಂಜಾನೆಯಿಂದಲೇ ನಾಡ ಅಧಿದೇವತೆ ಚಾಮುಂಡಿ ದರ್ಶನ್ಕಕೆ ಭಕ್ತರು ಆಗಮಿಸುತ್ತಿದ್ದಾರೆ.
ಆಷಾಢ ಮಾಸದ ಶುಕ್ರವಾರದಂದು ನಾಡದೇವತೆ ಭಕ್ತರನ್ನು ಆಶೀರ್ವಾದಿಸಲು ಬರುತ್ತಾಳೆ ಎಂಬ ನಂಬಿಕೆ ಇದೆ. ಈ ದಿನ ದೇವಿಯ ದರ್ಶನ ಪಡೆದರೆ ಸಹಸ್ರ ಪುಣ್ಯದ ಫಲ ದೊರೆಯಲಿದೆ ಎಂಬ ಪ್ರತೀತಿ ಇದೆ.
ಇದೇ ಕಾರಣದಿಂದ ಸಾವಿರಾರು ಜನರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಾರೆ. ಅಲ್ಲದೇ ಭಕ್ತರು ವಿವಿಧ ಸೇವೆಗಳನ್ನು ಹಾಗೂ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಹರಕೆ ಹೊತ್ತ ಭಕ್ತರು ಕಾಣಿಕೆ ನೀಡುತ್ತಿದ್ದಾರೆ.
ಆಷಾಢ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿವಿಧ ಹೂವು-ಹಣ್ಣುಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಮುಂಜಾನೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ರುದ್ರಾಭಿಷೇಕ, ಪಂಚಾಮೃತ ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.
ಆಷಾಢ ಮಾಸದ ನಾಲ್ಕನೇ ಶುಕ್ರವಾರವಾದ ಹಿನ್ನೆಲೆಯಲ್ಲಿ ಇಂದು ಚಾಮುಂಡೇಶ್ವರಿ ತಾಯಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿದೆ.
ಇನ್ನು ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತರಿಗೆ ಉಚಿತ ಬಸ್‌ವ್ಯವಸ್ಥೆ ಮಾಡಲಾಗಿದ್ದು, ಉಚಿತ ದರ್ಶನ, 300 ರೂಪಾಯಿ ದರ್ಶನ ಹಾಗೂ 2000 ರೂಪಾಯಿ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ಚಾಮುಂಡಿಬೆಟ್ಟದ ಪ್ರಾಧಿಕಾರದ ವತಿಯಿಂದಲೇ ದರ್ಶನಕ್ಕೆ ಬಂದ ಭಕ್ತರಿಗೆ ಚಿಕ್ಕ ಡ್ರೈಫ್ರೂಟ್ಸ್ ಪ್ಯಾಕೆಟ್ ನೀಡಲಾಗುತ್ತದೆ. ಜೊತೆಗೆ ವಿಶೇಷ ದರ್ಶನಕ್ಕೆ ಹಣ ನೀಡಿ ರಶೀದಿ ಪಡೆದವರಿಗೆ ವಿಶೇಷ ದರ್ಶನದ ಜೊತೆಗೆ ಅರಶಿನ, ಕುಂಕುಮ ಹಾಗೂ ಇತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಜೊತೆಗೆ ಚಾಮುಂಡೇಶ್ವರಿ ದೇವಾಲಯದ ಒಳಭಾಗದಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ದೇವಾಲಯದ ಉತ್ಸವ, ಗರ್ಭಗುಡಿ ಹಾಗೂ ಇತರ ಭಾಗಗಳಲ್ಲಿ ಮೊಬೈಲ್‌ನಲ್ಲಿ ಫೋಟೋ ತೆಗೆಯುವುದು ಹಾಗೂ ರೀಲ್ಸ್ ಮಾಡುವುದನ್ನು ನಿಷೇಧಿಸಲಾಗಿದೆ.
ಇನ್ನು ಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭಕ್ತರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.





