ಮೈಸೂರು: ʼಜೆಡಿಎಸ್ ಶಾಸಕರನ್ನು ಕರೆ ತರುತ್ತೇನೆʼ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಚನ್ನಪಟ್ಟಣದ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರು ಗೆಲುವು ಸಾಧಿಸಿದ್ದಾರೆ. ಜನರ ಸೇವೆ ಮಾಡಲು ಇನ್ನು 3 ವರ್ಷ ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಂಡು ಕ್ಷೇತ್ರದ ಅಭಿವೃದ್ದಿ ಮಾಡಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ನಲ್ಲಿ 35ಕ್ಕೂ ಹೆಚ್ಚು ಅಸಮಧಾನ ಶಾಸಕರಿದ್ದಾರೆ ಎಂಬುದು ಯೋಗೇಶ್ವರ್ ಅವರಿಗೂ ಗೊತ್ತು. ಸಿಎಂ, ಡಿಸಿಎಂ ಮುಖಾಂತರ ಆ ಅಸಮಾಧಾನಿತ ಶಾಸಕರನ್ನು ಸಮಾಧಾನ ಮಾಡುವ ಕೆಲಸವನ್ನು ಮೊದಲು ಮಾಡಿ. ನಂತರ ಜೆಡಿಎಸ್ ಶಾಸಕರ ಬಗ್ಗೆ ಮಾತನಾಡಲಿ ಎಂದು ಟಾಂಗ್ ಕೊಟ್ಟರು.
ಮೈತ್ರಿ ಸರ್ಕಾರದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯನ್ನು ಕೆಳಗಿಳಿಸಲು ಸಹಾಯ ಮಾಡಿದ್ದು ಯಾರು ಅಂತ ಗೊತ್ತಿದೆ. ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಪಕ್ಷದ ಶಾಸಕರು ಜೆಡಿಎಸ್ ಪರವಾಗಿ ಇದ್ದಾರೆ. ಮೊದಲು ನಿಮ್ಮ ಸರ್ಕಾರ ಉಳಿಸಿಕೊಳ್ಳುವ ಕೆಲಸ ಮಾಡಿ ಎಂದು ಕಿಡಿಕಾರಿದರು.