ಮೈಸೂರು: ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ರೈತನ ಮೃತದೇಹವನ್ನು ಯಾಕೆ ಮೈಸೂರಿಗೆ ತಂದರು ಎಂದು ನನಗೆ ಗೊತ್ತಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿ ದಾಳಿಗೆ ಸಿಲುಕಿ ರೈತ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತನ ಮೃತದೇಹವನ್ನು ಮೈಸೂರಿಗೆ ತಂದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಇದನ್ನು ಓದಿ: ಹುಲಿ ದಾಳಿಗೆ ರೈತ ಬಲಿ ಪ್ರಕರಣ: ಸಚಿವ ಈಶ್ವರ್ ಖಂಡ್ರೆಗೆ ರೈತರ ಘೇರಾವ್
ರೈತನ ಮೃತ ದೇಹವನ್ನು ಯಾಕೆ ಮೈಸೂರಿಗೆ ತಂದರು ಎಂಬುದು ನನಗೆ ಗೊತ್ತಿಲ್ಲ. ನಾನು ಅಂತಿಮ ದರ್ಶನ ಪಡೆಯಲು ಮೈಸೂರಿಗೆ ತಂದಿದ್ದಾರೆ ಎಂಬುದು ಸುಳ್ಳು. ನಾನು ಈ ಬಗ್ಗೆ ಅಧಿಕಾರಿಗಳ ಬಳಿ ವಿವರಣೆ ಕೇಳುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ತಡವರಿಸಿಕೊಂಡು ಉತ್ತರಿಸಿದರು.
ಇನ್ನು ಪರಿಸ್ಥಿತಿಗಳ ಆಧಾರದ ಮೇಲೆ ನಿನ್ನೆ ನಾನು ಘಟನಾ ಸ್ಥಳಕ್ಕೆ ಹೋಗಲಿಲ್ಲ. ನಮ್ಮ ಶಾಸಕರು ಎಲ್ಲರೂ ಅಲ್ಲಿಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಹುಲಿ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಬೋನ್ ಇಡುವಲ್ಲಿ ನಿರ್ಲಕ್ಷ್ಯ ಯಾಕೆ ವಹಿಸಿದರು ಎಂಬ ಬಗ್ಗೆ ವಿವರಣೆ ಕೇಳುತ್ತೇನೆ. ಅಧಿಕಾರಿಗಳ ನಿರ್ಲಕ್ಷ್ಯ ಇದ್ದರೇ ಅವರನ್ನು ಕೂಡಲೇ ಅಮಾನತ್ತು ಮಾಡುತ್ತೇನೆ. ಇಂದು ಸಂಜೆ ಹಿರಿಯ ಅಧಿಕಾರಿಗಳ ಸಭೆ ಕರೆಯುತ್ತಿದ್ದೇನೆ. ಸಭೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.





