ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಶುರುವಾಗಿರುವ ಹಿನ್ನೆಲೆಯಲ್ಲಿ ಅಹಿಂದ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಪರ ನಿಂತಿವೆ.
ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇದೆ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಮಾತು ಸಿಎಂ ಸಿದ್ದರಾಮಯ್ಯ ಬೆಂಬಲಿಗರಿಗೆ ಬೇಸರ ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅಹಿಂದ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಪರ ನಿಂತಿದ್ದು, ಸಿದ್ದರಾಮಯ್ಯರನ್ನು 5 ವರ್ಷ ಸಿಎಂ ಆಗಿ ಮುಂದುವರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅಂಚೆ ಮೂಲಕ ಪತ್ರ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:-ರಾಜ್ಯದಲ್ಲಿ ತಾರಕಕ್ಕೇರಿದ ಸಿಎಂ ಬದಲಾವಣೆ ಚರ್ಚೆ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಅಹಿಂದ ಸಂಘಟನೆಗಳು
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ನಡೆದ ಪತ್ರ ಚಳುವಳಿಯಲ್ಲಿ ಮಾತನಾಡಿದ ಅಹಿಂದ ಸಂಘಟನೆ ನಾಯಕರು, ರಾಜ್ಯದಲ್ಲಿ ಇನ್ನು ಮುಂದೆ ಸಿಎಂ ಯಾರಾಗಬೇಕೆಂದು ಚರ್ಚೆಯಾಗಬಾರದು. ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷಗಳು ಸಿಎಂ ಆಗಿ ಇರುತ್ತಾರೆ ಎಂದು ರಾಹುಲ್ ಗಾಂಧಿ ಅವರು ಸ್ಪಷ್ಟಪಡಿಸಬೇಕು. ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು. ಈ ರೀತಿ ಪದೇ ಪದೇ ಸಿಎಂ ಬದಲಾವಣೆ ಎಂದು ಚರ್ಚೆ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಕೆಲಸ ಮಾಡಲು ಒತ್ತಡವಾಗುತ್ತದೆ. ಅಹಿಂದ ಸಮುದಾಯಗಳು ಶೇಕಡಾ 80% ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವಂತೆ ಒತ್ತಾಯಿಸಿದರು.





