ಮೈಸೂರು: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಇಂದು ಮುಂಜಾನೆ ಧರ್ಮಸ್ಥಳ ಚಲೋ ಯಾತ್ರೆ ಕೈಗೊಂಡಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ 5 ಗಂಟೆಗೆ ಸಾ.ರಾ.ಕನ್ವೆನ್ಷನ್ ಹಾಲ್ ಬಳಿಯಿರುವ ಗಣೇಶನಿಗೆ ಪೂಜೆ ಸಲ್ಲಿಸಿ ಸುಮಾರು 20ಕ್ಕಿಂತಲೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳದ ಪರವಾಗಿ ಘೋಷಣೆ ಕೂಗುತ್ತಾ ತೆರಳಿದರು.
ಇನ್ನು ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಚಾಕು ಸಿಕ್ಕಿದೆ. ಚಾಕು ಹಿಂದೆ ಇರುವ ಕೈ ಬಂಧಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಬಂಧನದಿಂದ ಎಲ್ಲಾ ಮುಗಿದಿಲ್ಲ. ಮಾಸ್ಕ್ ಮ್ಯಾನ್ ಇಲ್ಲಿ ಕೇವಲ ನೆಪ ಮಾತ್ರ. ಚಾಕು ಸಿಕ್ಕಿದೆ. ಈಗ ಚಾಕು ಹಿಂದೆ ಇರುವ ಕೈಯನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರ ಬಂಧನ ಆಗಬೇಕು ಎಂದು ಆಗ್ರಹಿಸಿದರು.





