ಮೈಸೂರು: ಧರ್ಮಸ್ಥಳ ಅಪರಿಚಿತ ಶವಗಳ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಯಾರೋ ಹೇಳಿದರೂ ಅಂತಾ ಎಸ್‌ಐಟಿ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಹೇಳಿದರು ಅಂತ ಕಾರಣಕ್ಕೆ ದಿಢೀರ್ ಎಸ್‌ಐಟಿ ಮಾಡಲು ಆಗುವುದಿಲ್ಲ.
ಎತ್ತು ಮರಿ ಹಾಕಿತ್ತು ಅಂತ ಹೇಳಿ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ ಎಂದು ಪ್ರಶ್ನೆ ಮಾಡಿದ ಅವರು, ಇದು ಅದೇ ರೀತಿ. ಒಬ್ಬ ವ್ಯಕ್ತಿ ಬಂದು ಸ್ವಇಚ್ಛೆಯಿಂದ ಹೇಳಿಕೆ ಕೊಟ್ಟಿದ್ದಾನೆ. ನಾನು ಧರ್ಮಸ್ಥಳದಲ್ಲಿ ಎಷ್ಟೋ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಪೊಲೀಸರು ಏನು ವರದಿ ಕೊಡುತ್ತಾರೆ ನೋಡೋಣಾ.
ಆ ವರದಿ ಆಧಾರದ ಮೇಲೆ ನಾವು ಮುಂದಿನ ಕ್ರಮ ಹೇಳುತ್ತೇವೆ. ಈಗಲೇ ಯಾರೋ ಹೇಳಿದರು ಎಂದು ಏನೇನೊ ಘೋಷಣೆ ಮಾಡಲು ಸಾಧ್ಯವಿಲ್ಲ. ಧರ್ಮಸ್ಥಳದ ಪ್ರಕರಣದಲ್ಲಿ ನಮ್ಮ ಮೇಲೆ ಯಾರ ಒತ್ತಡ ಇಲ್ಲ. ಒತ್ತಡ ಬಂದರೂ ನಾವು ಅದಕ್ಕೆ ಬಗ್ಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಆರ್‌ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕುನ್ನಾ ಅವರು ವರದಿ ಕೊಟ್ಟಿದ್ದಾರೆ. ಆ ವರದಿ ಸಂಪುಟದಲ್ಲಿ ಮಂಡನೆಯಾಗಿದೆ. ಆದರೆ ಈ ಬಗ್ಗೆ ಚರ್ಚೆ ಆಗಿಲ್ಲ. ಆ ವರದಿಯ ಮುಖ್ಯ ಅಂಶಗಳನ್ನು ಸಚಿವರಿಗೆ ಕೊಟ್ಟಿದ್ದೇವೆ. ಮುಂದಿನ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.




